ಹೊಸದಿಲ್ಲಿ,ಮೇ12(DaijiworldNews/AZM): ದಿಲ್ಲಿಯ ಔರಂಗಾಜೇಬ್ ಲೇನ್ನಲ್ಲಿರುವ ಎನ್ಪಿ ಸೀನಿಯರ್ ಸೆಕೆಂಡರಿ ಸ್ಕೂಲ್ನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಇಂದು ತಮ್ಮ ಮತ ಚಲಾಯಿಸಿದ್ದಾರೆ.
ರಾಹುಲ್ ಉನ್ನತ ಭದ್ರತೆಯಿರುವ ವಾಹನವಿಲ್ಲದೆ ಅಂಗರಕ್ಷಕರೊಂದಿಗೆ ಕೇಂದ್ರ ದಿಲ್ಲಿಯಲ್ಲಿರುವ ತನ್ನ ಮನೆಯಿಂದ ಮತದಾನ ಕೇಂದ್ರಕ್ಕೆ ನಡೆದುಕೊಂಡು ಹೋಗಿ ಮತ ಚಲಾಯಿಸಿದ್ದಾರೆ.
ಮತದಾನದ ಬಳಿಕ ಮಾದ್ಯಮದೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ''ಈ ಬಾರಿಯ ಲೋಕಸಭೆ ಚುನಾವಣೆ ಉತ್ತಮ ಪೈಪೋಟಿಯಿಂದ ಕೂಡಿದೆ. ನರೇಂದ್ರ ಮೋದಿ ದ್ವೇಷ ಹರಡುತ್ತಿದ್ದಾರೆ. ಆದರೆ, ನಾವು ಜನತೆಗೆ ಪ್ರೀತಿ ಹಂಚುತ್ತೇವೆ. ನಿರುದ್ಯೋಗ, ರೈತರ ಬಿಕ್ಕಟ್ಟು, ನೋಟು ನಿಷೇಧ ಹಾಗೂ ಭ್ರಷ್ಟಾಚಾರ ವಿರುದ್ಧ ನಾವು ಹೋರಾಟ ನಡೆಸುತ್ತಿದ್ದು, ನಾವು ಅಧಿಕಾರಕ್ಕೆ ಬಂದರೆ, ಇವೆಲ್ಲವನ್ನೂ ಬಗೆಹರಿಸಲು ಗಮನ ನೀಡುತ್ತೇವೆ'' ಎಂದರು.
ಲೋಕಸಭಾ ಚುನಾವಣೆಯ 6ನೇ ಹಂತದ ಮತದಾನದಲ್ಲಿ 7 ರಾಜ್ಯಗಳ 59 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಒಟ್ಟು 979 ಅಭ್ಯರ್ಥಿಗಳು ಕಣದಲ್ಲಿದ್ದು, 10.17 ಕೋಟಿ ಮತದಾರರು ಈ ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.