ಹುಬ್ಬಳ್ಳಿ,ಮೇ12(DaijiworldNews/AZM):ನಮ್ಮ ಜೊತೆ ಬಿಜೆಪಿಯ 10 ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಮೈತ್ರಿ ಸರ್ಕಾರದ ೨೦ ಶಾಸಕರು ತಮ್ಮ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿ ಹೇಳಿದ ಬೆನ್ನಲ್ಲೇ ಜಮೀರ್ ಅಹ್ಮದ್ ಹೊಸ ಬಾಂಬ್ ಸಿಡಿಸಿದ್ದಾರೆ. ಈ ಕುರಿತು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜಮೀರ್ ಅಹ್ಮದ್, ಬಿಜೆಪಿಯವರು ತಮ್ಮ ಜೊತೆ 20 ಶಾಸಕರು ಬಹಿರಂಗಪಡಿಸಿದರೆ, ನಾವು ಕೂಡ ಬಿಜೆಪಿಯ 10 ಶಾಸಕರ ಹೆಸರನ್ನು ಬಹಿರಂಗಪಡಿಸುತ್ತೇವೆ ಎಂದು ಸವಾಲು ಹಾಕಿದ್ದಾರೆ.
ಬಿಜೆಪಿಯವರು ಸುಮ್ಮನೆ ಬೊಗಳೆ ಬಿಡುತ್ತಾರೆ. 23 ಅಲ್ಲ, ಇನ್ನೂ ಎರಡು ದಿನ ಹೆಚ್ಚುವರಿಯಾಗಿ ತೆಗೆದುಕೊಂಡು 25 ಕ್ಕೆ ಸರ್ಕಾರ ರಚಿಸಲಿ. ಹಾಗೆ ಅವರು ಸರ್ಕಾರ ರಚಿಸಿದ್ದೇ ಆದಲ್ಲಿ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಸರ್ಕಾರ ರಚಿಸದೇ ಹೋದರೆ ಬಿ.ಎಸ್. ಯಡಿಯೂರಪ್ಪ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತಾರಾ ಎಂದು ಪ್ರಶ್ನಿಸಿದ್ದಾರೆ.