ಕಲಬುರಗಿ, ಮೇ 12 (Daijiworld News/SM): 'ಲೋಕಸಭಾ ಚುನಾವಣೆ ಫಲಿತಾಂಶ ಹೊರಬೀಳಲು ಇನ್ನು ಹೆಚ್ಚು ದಿನಗಳು ಉಳಿದಿಲ್ಲ. ಫಲಿತಾಂಶ ಹೊರ ಬಿದ್ದ ಬಳಿಕ ರಾಜ್ಯದ ರಾಜಕೀಯ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಯಾಗದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಬಿಜೆಪಿಗರು ರಾಜ್ಯದಲ್ಲಿ ಅಧಿಕಾರ ನಡೆಸಬೇಕೆನ್ನುವ ಹಗಲುಗನಸು ಕಾಣುತ್ತಿದ್ದಾರೆ. ಫಲಿತಾಂಶ ಹೊರಬಿದ್ದ ನಂತರ ಮೈತ್ರಿ ಸರಕಾರ ಪತನವಾಗುತ್ತದೆ ಎನ್ನುತ್ತಿದ್ದಾರೆ. ಆದರೆ, ರಾಜ್ಯ ರಾಜಕಾರಣದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
'ಮೇ 23ರಂದು ರಾಷ್ಟ್ರ ರಾಜಕಾರಣದ ಭವಿಷ್ಯ ನಿರ್ಧರವಾಗಲಿದೆಯೇ ಹೊರತು ರಾಜ್ಯಕ್ಕೂ ಅದಕ್ಕೂ ಯಾವುದೇ ಸಂಬಂಧವಿಲ್ಲ' ಎಂದು ಸ್ಪಷ್ಟಪಡಿಸಿದರು. 'ದೇಶದಲ್ಲಿ ನರೇಂದ್ರ ಮೋದಿಯವರ ವಿರೋಧಿ ಅಲೆಯಿದೆ. ಕಳೆದ ಬಾರಿಯಂತೆ ಬಿಜೆಪಿಯನ್ನು ಒಳಗೊಂಡ ಎನ್ಡಿಎ ಕೂಟ ಸ್ಪಷ್ಟ ಬಹುಮತ ಪಡೆಯಲಾರದು. ಕಳೆದ ಬಾರಿ ಗೆದ್ದ ಸ್ಥಾನಗಳಲ್ಲಿ ಬಿಜೆಪಿ ಕನಿಷ್ಟ ನೂರು ಸ್ಥಾನಗಳನ್ನು ಕಳೆದುಕೊಳ್ಳಲಿದೆ' ಎಂದು ಹೇಳಿದರು.