ಕೋಲ್ಕತ್ತಾ, ಜೂ. 09(DaijiworldNews/AA): ಬಿಜೆಪಿಯ ಕನಿಷ್ಟ 5 ಸಂಸದರು ಇಂಡಿಯಾ ಒಕ್ಕೂಟದ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಹೊಸ ಬಾಂಬ್ ಸಿಡಿಸಿದೆ.
ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಕೇವಲ 15 ದಿನಗಳಲ್ಲಿ ಸರ್ಕಾರ ಪತನ ಆಗುತ್ತದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿಕೆ ಬೆನ್ನಲ್ಲೇ ಈ ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಚುನಾಯಿತರಾಗಿರುವ 12 ಬಿಜೆಪಿ ಸಂಸದರ ಪೈಕಿ ಐವರು ಸಂಸದರು ಶೀಘ್ರದಲ್ಲೇ ಬಿಜೆಪಿ ತೊರೆದು ಟಿಎಂಸಿಗೆ ಸೇರ್ಪಡೆಗೊಳ್ಳಲಿದ್ದಾರೆ. ಬಿಜೆಪಿಯ ಕನಿಷ್ಟ 5 ಸಂಸದರು ತೃಣಮೂಲ ಕಾಂಗ್ರೆಸ್ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸೋತಿರುವ ಬಿಜೆಪಿ ಅಭ್ಯರ್ಥಿಗಳು ಕೂಡ ಟಿಎಂಸಿ ಪಕ್ಷಕ್ಕೆ ಸೇರಲು ಬಯಸುತ್ತಿದ್ದಾರೆ. ಇಂದು ನಡೆಯುವ ಸಂಸದರ ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಪಶ್ಚಿಮ ಬಂಗಾಳದಲ್ಲಿ ಈ ಮಹತ್ವದ ಬದಲಾವಣೆ ನಡೆಯಲಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.
ಇನ್ನು ಐವರು ಬಿಜೆಪಿ ಸಂಸದರು ತಕ್ಷಣವೇ ಟಿಎಂಸಿಗೆ ಸೇರ್ಪಡೆಗೊಳ್ಳಲು ತಯಾರಾಗಿದ್ದಾರೆ. ಕೆಲವರು ಮೋದಿ ಸಚಿವ ಸಂಪುಟದಲ್ಲಿ ಸ್ಥಾನ ಹಂಚಿಕೆ ನಂತರ ಪಕ್ಷ ಬದಲಾವಣೆ ಮಾಡುವ ಬಗ್ಗೆ ನಿರ್ಧಾರ ಮಾಡಲಿದ್ದಾರೆ. ಇನ್ನು ಎನ್ಡಿಎಯ ಒಟ್ಟು 10 ಸಂಸದರು ಇಂಡಿಯಾ ಒಕ್ಕೂಟದ ವಿವಿಧ ಪಕ್ಷಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಟಿಎಂಸಿ ಮೂಲಗಳು ತಿಳಿಸಿದೆ.