ಬೆಂಗಳೂರು,ಮೇ13(DaijiworldNews/AZM):ಪ್ರಧಾನಿ ಮೋದಿ ಮಾಡುವ ಸಂದರ್ಶನಗಳೆಲ್ಲಾವೂ ಸ್ಕ್ರಿಪ್ಟೆಡ್. ಹಾಗಾಗಿ ಅವರು ರಾಹುಲ್ ಗಾಂಧಿ ಜೊತೆ ಡಿಬೇಟ್ ಮಾಡಲು ಒಪ್ಪಿಕೊಳ್ಳುತ್ತಿಲ್ಲ ಎಂದು ನಟಿ ಕಾಂಗ್ರೆಸ್ನ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ ಮೋದಿ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಈ ಕುರಿತು ದಾಖಲೆ ಸಹಿತ ಟ್ವೀಟ್ ಮಾಡಿದ ರಮ್ಯಾ,ಶನಿವಾರದಂದು ಪ್ರಧಾನಿ ಮೋದಿ ಖಾಸಗಿ ಚಾನೆಲ್ವೊಂದಕ್ಕೆ ಸಂದರ್ಶನ ನೀಡಿದ್ದ ವೀಡಿಯೋವೊಂದನ್ನು ಅಪ್ ಲೋಡ್ ಮಾಡಿದ್ದಾರೆ. ಈ ವಿಡಿಯೋವನ್ನ ಸರಿಯಾಗಿ ಗಮಿನಿಸಿ. ವಿಡಿಯೋದ ಮೊದಲ ಮೂರು ಸೆಕೆಂಡ್ಗಳಲ್ಲಿ ಸಂದರ್ಶನದ ಪ್ರಶ್ನೆ ಮತ್ತು ಉತ್ತರಗಳೆರೆಡು ಮೋದಿಯವರ ಕೈಯಲ್ಲಿರುವುದು ಕಾಣುತ್ತದೆ. ಸಂದರ್ಶನಕ್ಕೆ ಯಾರಾದರೂ ಪ್ರಶ್ನೋತ್ತರಗಳನ್ನು ಮೊದಲೇ ಬರೆದುಕೊಂಡು ಬರುತ್ತಾರಾ? ಆದರೆ ಇಲ್ಲಿ ಕೇಳುವ ಪ್ರಶ್ನೆಗಳಿಗೆ ಮೊದಲೇ ಪ್ರಧಾನಿ ಅವರು ರೆಡಿಯಾಗಿ ಬಂದಿದ್ದಾರೆ. ಇತರ ಸಂದರ್ಶನಕ್ಕೆ ಹೋಲಿಸಿದ್ರೆ, ತುಂಬಾ ಕೆಟ್ಟದ್ದು ಎಂದು ಪೋಸ್ಟ್ ಮಾಡಿದ್ದಾರೆ. ಅಲ್ಲದೇ, ರಾಹುಲ್ ಗಾಂಧಿ ಅವರ ಜೊತೆಗೆ ಮೋದಿ ಡಿಬೇಟ್ ಯಾಕೆ ಮಾಡಲ್ಲ ಎಂಬುದು ಈಗ ತಿಳಿದಿದೆ ಎಂದು ವ್ಯಂಗ್ಯವಾಡಿದ್ದಾರೆ.
ಇನ್ನೊಂದೆಡೆ ಸಂದರ್ಶನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ಪ್ರಧಾನಿ 1988 ರಲ್ಲಿ ತಮ್ಮ ಬಳಿ ಡಿಜಿಟಲ್ ಕ್ಯಾಮರಾ ಇತ್ತು, ಹಾಗೂ ಫೋಟೋವೊಂದನ್ನು ಇಮೇಲ್ ಕಳುಹಿಸಿದ್ದೆ ಎಂದು ಹೇಳಿದ್ದರು. ಇದನ್ನೇ ಪ್ರಶ್ನಿಸಿರುವ ರಮ್ಯಾ, ಪ್ರಧಾನಿ ಮೋದಿ ಅವರು 1988ರಲ್ಲಿ ಇಮೇಲ್ ಐಡಿ ಹೊಂದಿದ್ದೇನೆ ಎಂದು ಹೇಳಿದ್ದರು. ಆದ್ರೆ, ಅಂದು ಇಡೀ ಜಗತ್ತೇ ಇಮೇಲ್ ಬಳಸುತ್ತಿರಲಿಲ್ಲ. ಹೀಗಿರುವಾಗ ಮೋದಿ ಅವರು ಅದ್ಯಾರಿಗೆ ಇಮೇಲ್ ಕಳಿಸಿದ್ರು ಎಂದು ಕಾಲೆಳೆದರು.