ಬೆಂಗಳೂರು, ಜೂ. 11(DaijiworldNews/AA): ದೇಶದ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಯುವಜನರಿಗೆ ಉದ್ಯೋಗ ನೀಡಲು ಯೋಜನೆ ಹಮ್ಮಿಕೊಳ್ಳುವುದು ಸೇರಿದಂತೆ, ಮುಂದಿನ 15 ರಿಂದ 20 ದಿನಗಳಲ್ಲಿ ಸಮಗ್ರ ಮುನ್ನೋಟವನ್ನು ಸಿದ್ಧಪಡಿಸಲಾಗುವುದು ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.
ತಮ್ಮ ಮೇಲೆ ವಿಶ್ವಾಸವಿಟ್ಟು ಅತ್ಯಂತ ಪ್ರಮುಖ ಖಾತೆಯೊಂದನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದಾರೆ. ಇದನ್ನು ಸಮರ್ಥವಾಗಿ ನಿಭಾಯಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಕೆಜಿಎಫ್ ಗಣಿ ಪ್ರದೇಶದಲ್ಲಿ ಯಾವುದೇ ಉದ್ದೇಶಕ್ಕೆ ಬಳಕೆಯಾಗದೆ ವ್ಯರ್ಥವಾಗಿ ಉಳಿದಿರುವ 12 ಸಾವಿರ ಎಕರೆ ಗಣಿ ಭೂಮಿಯನ್ನು ಕೈಗಾರಿಕೆ ಅಭಿವೃದ್ಧಿಗೆ ಬಳಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.
ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ ನೀಡಲಾಗಿದ್ದು. ಅವರು ನಿನ್ನೆ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ಇವರೊಂದಿಗೆ ರೈಲ್ವೆ ರಾಜ್ಯಖಾತೆ ಸಚಿವ ವಿ. ಸೋಮಣ್ಣ ಅವರು ಕೂಡ ಬೆಂಗಳೂರಿಗೆ ಆಗಮಿಸಿದ್ದಾರೆ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ವಿ. ಸೋಮಣ್ಣ ಅವರು, ಇಲಾಖೆ ಕುರಿತು ಸಮಗ್ರವಾಗಿ ಅಧ್ಯಯನ ನಡೆಸಿ, ಕರ್ನಾಟಕ ಸೇರಿದಂತೆ ರಾಷ್ಟ್ರದ ಅಭಿವೃದ್ಧಿಗೆ ಕಾರ್ಯ ಯೋಜನೆಗಳನ್ನು ರೂಪಿಸಲಾಗುವುದು ಎಂದರು.