ಭುವನೇಶ್ವರ,ಮೇ13(DaijiworldNews/AZM): ಒಡಿಶಾ ಕರಾವಳಿಗೆ ಅಪ್ಪಳಿಸಿದ್ದ ಫನಿ ಚಂಡಮಾರುತದಿಂದ ಮತ್ತೆ 21 ಮಂದಿ ಮೃತಪಟ್ಟಿರುವುದಾಗಿ ಸರಕಾರ ದೃಢಪಡಿಸಿದೆ.
ಈ ಹಿನ್ನಲೆ ಮೃತಪಟ್ಟವರ ಸಂಖ್ಯೆ 43ರಿಂದ 64ಕ್ಕೇರಿದೆ.ಖುರ್ದಾ ಜಿಲ್ಲೆಯಲ್ಲಿ ಮೂವರು ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಬಲಿಯಾದವರ ಸಂಖ್ಯೆ 9ಕ್ಕೆ ಏರಿದೆ. ಒಟ್ಟು 64 ಮಂದಿಯ ಪೈಕಿ 25 ಮಂದಿ ಮನೆಗಳ ಗೋಡೆ ಕುಸಿತದಿಂದ, 20 ಮಂದಿ ಮರಗಳು, ವಿದ್ಯುತ್ ಕಂಬ, ಹೋರ್ಡಿಂಗ್ ಬುಡಮೇಲಾಗುವ ವೇಳೆ ಸಿಲುಕಿ ಮೃತಪಟ್ಟಿದ್ದಾರೆ. ಆರು ಮಂದಿ ಛಾವಣಿ ಕುಸಿತದಲ್ಲಿ ಮೃತರಾಗಿದ್ದು, 13 ಸಾವುಗಳ ಬಗ್ಗೆ ಇನ್ನೂ ಕಾರಣ ದೃಢಪಡಿಸಬೇಕಾಗಿದೆ. ಇದರಿಂದಾಗಿ 1999ರ ಸೂಪರ್ ಚಂಡಮಾರುತದ ಬಳಿಕ ಇದು ಅತ್ಯಂತ ಭೀಕರ ಚಂಡಮಾರುತ ಎನಿಸಿದೆ. 1999ರಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು.
2018ರ ಅಕ್ಟೋಬರ್ನಲ್ಲಿ ತಿತ್ಲಿ ಚಂಡಮಾರುತಕ್ಕೆ 60 ಮಂದಿ ಬಲಿಯಾಗಿದ್ದರು. ಪೈಲಾನ್ ಚಂಡಮಾರುತಕ್ಕೆ 2013ರ ಅಕ್ಟೋಬರ್ನಲ್ಲಿ 44 ಮಂದಿ ಜೀವ ಕಳೆದುಕೊಂಡಿದ್ದರು. ಈ ಪೈಕಿ 21 ಮಂದಿ ಚಂಡಮಾರುತದಿಂದ ಹಾಗೂ 23 ಮಂದಿ ಪ್ರವಾಹದಿಂದ ಸಾವಿಗೀಡಾಗಿದ್ದರು. ಫನಿಯಿಂದಾದ ಹಾನಿ ಅಂದಾಜಿಸಲು ಕೇಂದ್ರದ ಅಂತರ ಸಚಿವಾಲಯ ತಂಡ ಭುವನೇಶ್ವರ ತಲುಪಿದ್ದು, ಪುರಿ, ಕಟಕ್ ಹಾಗೂ ಖುರ್ದಾ ಜಿಲ್ಲೆಗಳಲ್ಲಿ ಹಾನಿಗೀಡಾದ ಪ್ರದೇಶಗಳಿಗೆ ಮುಂದಿನ ಮೂರು ದಿನಗಳ ಕಾಲ ಭೇಟಿ ನೀಡಿ ಪರಿಸ್ಥಿತಿ ಅಧ್ಯಯನ ಮಾಡಲಿದೆ.