ಚೈನ್ನೈ,ಮೇ13(DaijiworldNews/AZM):ಸ್ವತಂತ್ರ ಭಾರತದ ಮೊದಲ ಹಿಂದೂ ಭಯೋತ್ಪಾದಕ ನಾಥೂರಾಮ್ ಗೋಡ್ಸೆ ಎಂದು ನಟ,ಮಕ್ಕಳ್ ನೀದಿ ಮಯ್ಯಂ ನಾಯಕ ಕಮಲಹಾಸನ್ ಹೇಳಿದ್ದು, ಇದು ನಾನು ತನ್ನ ತನ್ನ ಕ್ಷೇತ್ರದಲ್ಲಿರುವ ಮುಸ್ಲಿಮರ ತುಷ್ಟೀಕರಣಕ್ಕಾಗಿ ಹೇಳುತ್ತಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.
ಮೇ 19ರಂದು ಅರವಕುರುಚ್ಚಿ ವಿಧಾನ ಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣಾ ಪ್ರಚಾರ ಸಭೆಯಲ್ಲಿ ಈ ಕುರಿತು ಅವರು ಮಾತನಾಡಿದ್ದಾರೆ. 'ಸ್ವತಂತ್ರ ಭಾರತದ ಮೊದಲ ಹಿಂದೂ ಭಯೋತ್ಪಾದಕ ನಾಥೂರಾಮ್ ಗೋಡ್ಸೆ ಎಂದು ನಾನಿಲ್ಲಿ ಗಾಂಧಿ ಪ್ರತಿಮೆಯ ಎದುರು ನಿಂತು ಹೇಳುತ್ತಿದ್ದೇನೆ. ಇದೇನೂ ಚುನಾವಣಾ ಗಿಮಿಕ್ ಅಲ್ಲ; ಅಥವಾ ಈ ಕ್ಷೇತ್ರದಲ್ಲಿರುವ ಗಣನೀಯ ಸಂಖ್ಯೆಯ ಮುಸ್ಲಿಮ್ ಬಾಂಧವರನ್ನು ಖುಷಿ ಪಡಿಸಲೂ ಅಲ್ಲ' ಎಂದು ತಿಳಿಸಿದರು.
'ನಾನು ನನ್ನ ಆತ್ಮಸಾಕ್ಷಿಯಲ್ಲಿ ಮಹಾತ್ಮ ಗಾಂಧಿಯವರ ಮರಿ ಮೊಮ್ಮಗನಾಗಿದ್ದೇನೆ. ನನ್ನ ಮುತ್ತಾತನ ಕೊಲೆಯನ್ನು ಇಂದು ನಾನಿಲ್ಲಿ ಪ್ರಶ್ನಿಸುತ್ತಿದ್ದೇನೆ; ನೀವು ಕೂಡ ಇದನ್ನು ದಯವಿಟ್ಟು ಆ ಅರ್ಥದಲ್ಲೇ ತಿಳಿಯಿರಿ ' ಎಂದು ಕಮಲ ಹಾಸನ್ ಇದೇ ಸಂದರ್ಭದಲ್ಲಿ ತಿಳಿಸಿದರು.