ಬೆಂಗಳೂರು,ಜೂ 13 (DaijiworldNews/MS): ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಮೇಲೆ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿರುವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲು ಜೆಡಿಎಸ್ ಕಾರ್ಯಕರ್ತರು ಸಿದ್ಧತೆ ಮಾಡಿಕೊಂಡಿದ್ದು, ಆ ಸಂಭ್ರಮದಲ್ಲಿ ನಾನು ಕೂಡ ಭಾಗಿಯಾಗುತ್ತೇನೆ ಎಂದು ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಪಕ್ಷದ ರಾಜ್ಯದ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು; ನಾಳೆ ಬೆಳಗ್ಗೆ (ಶುಕ್ರವಾರ) 11.50ಕ್ಕೆ ದೆಹಲಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅವರ ಸ್ವಾಗತಕ್ಕೆ ಎಲ್ಲಾ ಸಿದ್ಧತೆಗಳನ್ನು ಕಾರ್ಯಕರ್ತರು ಮಾಡಿಕೊಳ್ಳುತ್ತಿರುವುದು ನನಗೆ ಸಂತಸ ಉಂಟು ಮಾಡಿದೆ ಎಂದರು.
ಲೋಕಸಭೆ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟದ ಪರವಾಗಿ ದೇಶದ ಮತ್ತು ರಾಜ್ಯದ ಜನತೆ ಐತಿಹಾಸಿಕ ತೀರ್ಪು ನೀಡಿದ್ದಾರೆ. ಕಳೆದ ಎರಡು ಅವಧಿಗಳಲ್ಲಿ ಮೋದಿ ಅವರು ಅನೇಕ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಮತ್ತೆ ಮೋದಿಯವರು ಪ್ರಧಾನಿ ಆಗಲು ಜನ ತೀರ್ಪು ನೀಡಿದ್ದಾರೆ. ನಮ್ಮ ರಾಜ್ಯದಲ್ಲಿ ದೇವೇಗೌಡರು ಮೋದಿ ಅವರ ನಾಯಕತ್ವ ಮೆಚ್ಚಿ ಮೈತ್ರಿ ಭಾಗವಾಗಲು ತೀರ್ಮಾನ ಮಾಡಿದರು. ಚಾಮರಾಜನಗರ, ಹಾಸನ ಹೊರತುಪಡಿಸಿ ಹಳೇ ಮೈಸೂರು ಭಾಗದಲ್ಲಿ ಎಲ್ಲಾ ಕಡೆ ಮೈತ್ರಿ ಯಶಸ್ವಿಯಾಗಿದೆ. ಜನತೆಯ ವಿಶ್ವಾಸ ಉಳಿಸಿಕೊಳ್ಳುತ್ತೇವೆ ಎಂದು ನಿಖಿಲ್ ಅವರು ತಿಳಿಸಿದರು.
ಪಕ್ಷದ ಸಂಘಟನೆಗೆ ದುಡಿಯುತ್ತೇನೆ:
ಮುಂದಿನ ದಿನಗಳಲ್ಲಿ ಜೆಡಿಎಸ್ ಸಂಘಟನೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವೆ. 2019ರಲ್ಲಿ ಅನಿರೀಕ್ಷಿತವಾಗಿ ನಾನು ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಯಾದೆ. ರಾಜಕಾರಣ ದೊಡ್ಡ ಜವಾಬ್ದಾರಿ. ಪ್ರಾದೇಶಿಕ ಪಕ್ಷ ನಿಭಾಯಿಸುವ ಜವಾಬ್ದಾರಿ ಕೂಡ ದೊಡ್ಡದು. ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ಕೊಡುತ್ತೇನೆ. ಸಿನಿಮಾಗಳಿಂದ ಸ್ವಲ್ಪ ವಿರಾಮ ತೆಗೆದುಕೊಂಡಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಗ್ಯಾರಂಟಿ ನಿಲ್ಲಿಸುತ್ತೇವೆ ಎನ್ನುವುದು ಉದ್ದಟತನ:
ರಾಜ್ಯದಲ್ಲಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ. ಲೋಕಸಭೆ ಚುನಾವಣೆ ಮುಗಿದ ಬಳಿಕ ಗ್ಯಾರಂಟಿ ಯೋಜನೆಗಳನ್ನು ರದ್ದು ಮಾಡುವ ಬಗ್ಗೆ ಕಾಂಗ್ರೆಸ್ ನಾಯಕರೇ ಮಾತನಾಡುತ್ತಿದ್ದಾರೆ. ಇಂತಹ ಉದ್ಧಟತನದ ಮಾತುಗಳನ್ನು ಆಡುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯ ಹಾಗೂ ದೇಶದಲ್ಲಿ ನಮ್ಮ ಹೋರಾಟ ಇರುತ್ತದೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಹೇಳಿದರು.
ಹಾಸನದ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿದ ನಿಖಿಲ್ ಕುಮಾರಸ್ವಾಮಿ ಅವರು, ಈ ಸೋಲನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ಚುನಾವಣೆಯಲ್ಲಿ ಗೆಲುವು ಸೋಲು ಸಹಜ. ಸೋತ ಮಾತ್ರಕ್ಕೆ ನಾವು ಕೈ ಕಟ್ಟಿ ಮನೆಯಲ್ಲಿ ಕೂರುವುದಿಲ್ಲ. ಹಾಸನದಲ್ಲಿ ಪಕ್ಷವನ್ನು ನಂಬಿಕೊಂಡ ಹಲವಾರು ಕಾರ್ಯಕರ್ತರು ಇದ್ದಾರೆ. ಈ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳುತ್ತೇವೆ ಎಂದು ನಿಖಿಲ್ ಅವರು ತಿಳಿಸಿದರು.
ಹಾಸನ ಜಿಲ್ಲೆಯಲ್ಲಿ ಮುಂದೆ ಪಕ್ಷ ಕಟ್ಟುವ ಕೆಲಸ ಮಾಡುತ್ತೇವೆ. ಕಾರ್ಯಕರ್ತರಿಗೆ ಧೈರ್ಯ ತುಂಬಿ ಪಕ್ಷವನ್ನು ಬಲಪಡಿಸುತ್ತೇವೆ ಎಂದು ಅವರು ಹೇಳಿದರು.