ಶ್ರೀನಗರ, ಜೂ. 14(DaijiworldNews/AA): ರಿಯಾಸಿಯಲ್ಲಿ ಯಾತ್ರಾರ್ಥಿಗಳು ತೆರಳುತ್ತಿದ್ದ ಬಸ್ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 50 ಮಂದಿ ಸ್ಥಳೀಯರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
1995 ಮತ್ತು 2005 ನಡುವೆ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಅರ್ನಾಸ್ ಮತ್ತು ಮಹೋರ್ ಪ್ರದೇಶಗಳು ಉಗ್ರರಿಗೆ ಸುರಕ್ಷಿತ ತಾಣವಾಗಿತ್ತು. ಹೀಗಾಗಿ 50 ಮಂದಿ ಸ್ಥಳೀಯರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ರಿಯಾಸಿ ದಾಳಿಗೆ ಸಂಬಂಧಪಟ್ಟಂತೆ ಮಹತ್ವದ ಸುಳಿವೊಂದು ದೊರೆತಿದ್ದು, ಅರ್ನಾಸ್ ಮತ್ತು ಮಹೋರ್ನ ದೂರದ ಪ್ರದೇಶ ಒಳಗೊಂಡಂತೆ ಶೋಧ ಕಾರ್ಯಾಚರಣೆಗಳನ್ನು ವಿಸ್ತರಿಸಲಾಗಿದೆ ಎಂದು ಪೊಲೀಸ್ ವಕ್ತಾರರು ಮಾಹಿತಿ ನೀಡಿದ್ದಾರೆ.
ಭಾನುವಾರ ದೆಹಲಿ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಿಂದ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಶಿವ ಖೋರಿ ದೇವಸ್ಥಾನದಿಂದ ಕತ್ರಾದಲ್ಲಿರುವ ಮಾತಾ ವೈಷ್ಣೋದೇವಿ ದೇಗುಲಕ್ಕೆ ತೆರಳುತ್ತಿದ್ದಾಗ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಗುಂಡಿನ ದಾಳಿಗೆ ಬಸ್ ಕಮರಿಗೆ ಉರುಳಿ ಬಿದ್ದು 9 ಮಂದಿ ಸಾವನ್ನಪ್ಪಿ, 33 ಮಂದಿ ಗಾಯಗೊಂಡಿದ್ದರು.