ಅಸ್ಸಾಂ,ಮೇ13(DaijiworldNews/AZM):ಕೆಲವು ಕೋಮುವಾದಿಗಳು, ಮತದ್ವೇಷಿಗಳು ಹಿಂದೂ ಮುಸ್ಲಿಂ ಬಾಂಧ್ಯವ್ಯದ ನಡುವೆ ಹುಳಿ ಹಿಂಡುವ ಪ್ರಯತ್ನ ನಡೆಸುತ್ತಿದ್ದರೂ ಕೂಡಾ ಸಮಾಜದಲ್ಲಿ ಹಿಂದೂ ಮುಸ್ಲಿಂ ಬಾಂಧವರು ಸಹೋದರರಂತೆ ಬಾಳುತ್ತಿದ್ದಾರೆ. ಇದಕ್ಕೆ ಒಂದು ಉತ್ತಮ ಉದಾಹರಣೆ ಇಲ್ಲಿದೆ. ಅಸ್ಸಾಂ ನಲ್ಲಿ ರಂಜಾನ್ ಉಪವಾಸವಿದ್ದ ಮುಸ್ಲಿಂ ಯುವಕನೊಬ್ಬ, ಉಪವಾಸ ಮುರಿದು ಹಿಂದೂ ಯುವಕನಿಗೆ ರಕ್ತದಾನ ಮಾಡಿರುವ ಘಟನೆ ನಡೆದಿದೆ.
ಅಸ್ಸಾಂ ಮಂಗಲ್ದೈನ ನಿವಾಸಿ ಪನ್ಹುಲ್ಲಾ ಅಹ್ಮದ್ ಇಲ್ಲಿನ ಖಾಸಗೀ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದು,ಅವರ ಸಹೋದ್ಯೋಗಿ ತಪಾಶ್ ಭಗವತಿ ಎಂಬವರು ಕರೆ ಮಾಡಿ ಒಬ್ಬ ರೋಗಿಗೆ ತುರ್ತು ರಕ್ತ ಬೇಕು ಎಂದು ಮನವಿ ಮಾಡಿದ ಹಿನ್ನಲೆ,ಈ ಮನವಿಗೆ ಸ್ಪಂದಿಸಿ ಅಹ್ಮದ್ ಉಪವಾಸ ತೊರೆದು ರಕ್ತದಾನ ಮಾಡಿದ್ದಾರೆ.
ಅಸ್ಸಾಂನ ದೇಮಾಜಿ ಜಿಲ್ಲೆಯ ಯುವಕ ರಂಜನ್ ಗೂಗೋಯ್ ಎಂಬ ಯುವಕನಿಗೆ ಖಾಸಗೀ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಿತ್ತು. ರಂಜನ್ ದೇಹದಲ್ಲಿ ರಕ್ತ ಕಡಿಮೆ ಇದ್ದ ಕಾರಣ ರಕ್ತದಾನ ಮಾಡುವವರ ಅವಶ್ಯಕತೆ ಇತ್ತು. ರಂಜನ್ ಮನೆಯವರು ತುಂಬಾ ಜನರನ್ನು ರಕ್ತದಾನ ಮಾಡುವಂತೆ ಸಂಪರ್ಕಿಸಿದ್ದಾರೆ. ಅದರೆ ಆ ಸಮಯದಲ್ಲಿ ದಾನಿಗಳು ಸಿಕ್ಕಿರಲಿಲ್ಲ. ಈ ವೇಳೆ ಸಹೋದ್ಯೋಗಿ ಭಗವತಿ ಕರೆಗೆ ಸ್ಪಂದಿಸಿದ ಅಹ್ಮದ್ ರಕ್ತದಾನ ಮಾಡಲು ಒಪ್ಪಿಕೊಂಡಿದ್ದಾರೆ. ಉಪವಾಸ ಇರುವ ಈ ಸಮಯದಲ್ಲಿ ರಕ್ತ ನೀಡಿದರೆ ಆರೋಗ್ಯಕ್ಕೆ ತೊಂದರೆಯಾಗಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದರೂ ಧರ್ಮದ ಆಚರಣೆಯನ್ನು ಮುರಿದು ಊಟ ಸೇವಿಸಿ ಅಹ್ಮದ್ ರಕ್ತದಾನ ಮಾಡಿ ಮಾನವೀಯತೆ ತೋರಿಸಿದ್ದಾರೆ.
ಟೀಂ ಹ್ಯುಮಾನಿಟಿ ಪೇಜ್ ಸ್ನೇಹಿತರಾದ ಅಹ್ಮದ್ ಮತ್ತು ತಪಾಶ್ ಭಗವತಿ ಅವರ ಫೋಟೋವನ್ನು ಕಳುಹಿಸಿ ಈ ಸುದ್ದಿಯನ್ನು ಪ್ರಕಟಿಸಿದೆ. ಇವರಿಬ್ಬರು ನಿರಂತರ ರಕ್ತದಾನ ಮಾಡುತ್ತಿರುತ್ತಾರೆ ಎಂದು ಪೋಸ್ಟ್ ಹಾಕಿದೆ.
ಕೋಮುವಾದಿಗಳು ಎಷ್ಟೂ ದ್ವೇಷಕಟ್ಟಿದರೂ ಕೂಡಾ ಉತ್ತಮ ಮನಸ್ಸಿರುವ ಹಿಂದೂ ಮುಸ್ಲಿಂ ಬಾಂಧವರು ಸಮಾಜದಲ್ಲಿ ಸಹೋದರರಂತೆ ಬಾಳುತ್ತಿದ್ದಾರೆ. ಇದಕ್ಕೆ ಹಲವು ಉದಾಹರಣೆಗಳು ಇವೆ.