ಬೆಂಗಳೂರು, ಜೂ 15 (DaijiworldNews/MS): ನಾನು ಕೇಂದ್ರ ಸಚಿವನಾಗಿದ್ದು ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರಕ್ಕೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ನನ್ನ ವಿರುದ್ಧ ಒಳಸಂಚು ನಡೆಸುತ್ತಿದೆ ಎಂದು ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.
ರಾಜ್ಯಪಾಲರನ್ನು ಭೇಟಿಯಾದ ರಾಜಭವನದ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ದೇವೆಗೌಡರ ಕುಟುಂಬದ ವರ್ಚಸ್ಸು ಹಾಳು ಮಾಡಿದ್ದು ಆಯಿತು. ಈಗ ಯಡಿಯೂರಪ್ಪ ಅವರನ್ನು ಮುಗಿಸಲು ಹೊರಟಿದ್ದಾರೆ. ಅದಾದ ಮೇಲೆ ನನ್ನನ್ನು ಗುರಿ ಮಾಡಿದ್ದಾರೆ ಎಂದು ದೂರಿದರು.
ಯಡಿಯೂರಪ್ಪ ಅವರ ವಿಚಾರದಲ್ಲಿ ರಾಜ್ಯ ಸರ್ಕಾರ ಬಹಳ ಸಂಶಯಾಸ್ಪದವಾಗಿ ನಡೆದುಕೊಳ್ಳುತ್ತಿದೆ. ನನಗೆ ಈ ಸರ್ಕಾರದ ನಾಲ್ಕು ತಿಂಗಳ ನಡುವಳಿಕೆ ಮೇಲೆ ರಾಜ್ಯವೇ ಅನುಮಾನ ಪಡುವಂತೆ ಕಾಣುತ್ತಿದೆ. ಈ ಸರ್ಕಾರದಲ್ಲಿ ಕಾನೂನು ಪಂಡಿತರು ಬಹಳ ಜನ ಇದ್ದಾರೆ. ಅವರಿಗೆ ಹೇಳಿ, ಕುಮಾರಸ್ವಾಮಿಯದ್ದು ಏನಾದರೂ ಸಿಗುತ್ತದೆಯಾ ನೋಡಿ ಎಂದು ಕೆದಕಲು ಹೇಳಿದ್ದಾರೆ. ಅಂತಹ ಸಿಎಂ ಸಿದ್ದರಾಮಯ್ಯ ಅವರು ಈಗ ನಾಲ್ಕು ತಿಂಗಳ ನಂತರ ಯಡಿಯೂರಪ್ಪ ಅವರ ಕೇಸ್ ಕೆದಕ್ಕಿದ್ದಾರೆ. ನನ್ನ ಮುಗಿಸಲು ಪ್ರಯತ್ನ ಮಾಡ್ತಿದ್ದಾರೆ ಎಂದು ಕೇಂದ್ರ ಸಚಿವರು ಆರೋಪ ಮಾಡಿದರು.
ಕೆಲವು ನಾಯಕರು ನನ್ನ ಮುಗಿಸುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಅವರ ಪ್ರಯತ್ನ ಅವರು ಮಾಡಲಿ. ನನ್ನ ಮೇಲೆ ಯಾವುದಾದರೂ ಕೇಸ್ ಇದೆಯಾ ಎಂದು ಹುಡುಕುತ್ತಿದ್ದಾರೆ. ಕುಮಾರಸ್ವಾಮಿಯನ್ನು ಜೈಲಿಗೆ ಹಾಕಬೇಕು ಪ್ರಯತ್ನ ನಡೆಯುತ್ತಿದೆ. ಯಾವುದೋ ಹಳೇ ಕೇಸ್ ಹುಡುಕುತ್ತಿದ್ದಾರೆ. ಅವರಿಗೆ ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತನೆ ಇಲ್ಲ. ಕುಮಾರಸ್ವಾಮಿಯನ್ನು ಹೇಗೆ ಮುಗಿಸಿಬೇಕು ಎಂಬುದು ಪ್ಲಾನ್ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.
ಪೊಲೀಸ್ ಠಾಣೆಗೆ ಶಾಮಿಯಾನ ಎಲ್ಲೂ ನೋಡಿಲ್ಲ
ದರ್ಶನ್ ಕೇಸ್ ನಲ್ಲಿ ಪೊಲೀಸ್ ಠಾಣೆಗೆ ಶಾಮಿಯಾನ ಹಾಕಿದ ಬಗ್ಗೆ ಕೇಳಲಾದ ಪ್ರಶ್ನೆಗೆ; ಇತಿಹಾಸದಲ್ಲಿ ಈ ರೀತಿಯ ಘಟನೆ ಎಂದೂ ನಾನು ನೋಡಿಲ್ಲ. ಈ ಸರ್ಕಾರಕ್ಕೆ ಗೌರವ ಇದ್ದರೆ ಸರಿಪಡಿಸಿಕೊಳ್ಳಲಿ ಎಂದು ಟೀಕಿಸಿದರು.