ಇಂಫಾಲ್, ಜೂ. 15(DaijiworldNews/AA): ಮಣಿಪುರದ ರಾಜಧಾನಿ ಇಂಫಾಲ್ನಲ್ಲಿರುವ ಸಿಎಂ ಎನ್.ಬಿರೇನ್ ಸಿಂಗ್ ಅವರ ಬಂಗಲೆಯ ಸಮೀಪದ ಹೈ ಸೆಕ್ಯುರಿಟಿ ಸೆಕ್ರೆಟರಿಯೇಟ್ ಕಾಂಪ್ಲೆಕ್ಸ್ ಬಳಿ ಇರುವ ಕಟ್ಟಡದಲ್ಲಿ ಇಂದು ಸಂಜೆ ಭಾರೀ ಅಗ್ನಿ ದುರಂತ ಸಂಭವಿಸಿದೆ.
ಈ ಕಟ್ಟಡವು ಸಿಎಂ ಬಿರೇನ್ ಸಿಂಗ್ ಅವರ ಅಧಿಕೃತ ನಿವಾಸದಿಂದ ಕೇವಲ 100 ಮೀಟರ್ ದೂರದಲ್ಲಿದೆ. ನಾಲ್ಕು ಅಗ್ನಿಶಾಮಕ ವಾಹನಗಳ ಸಹಾಯದಿಂದ ಬೆಂಕಿಯನ್ನು ನಂದಿಸಲಾಗಿದೆ. ಘಟನೆಯಲ್ಲಿ ಸಾವು ನೋವುಗಳು ಉಂಟಾದ ಬಗ್ಗೆ ಹಾಗೂ ಅಗ್ನಿ ಅವಘಡಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಅಗ್ನಿ ಅವಘಡಕ್ಕೆ ಕಾರಣವೇನೆಂದು ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಮಣಿಪುರದ ಹಿಂಸಾಚಾರ ಪೀಡಿತ ಜಿರಿಬಾಮ್ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಿಎಂ ಎನ್.ಬಿರೇನ್ ಸಿಂಗ್ ಅವರ ಬೆಂಗಾವಲು ಪಡೆ ವಾಹನದ ಮೇಲೆ ಉಗ್ರರು ದಾಳಿ ನಡೆಸಿದ್ದರು. ಬೆಂಗಾವಲು ವಾಹನದ ಮೇಲೆ ಶಂಕಿತ ಉಗ್ರರು ಹೊಂಚುದಾಳಿ ನಡೆಸಿದ್ದು, ಈ ದಾಳಿಯಲ್ಲಿ ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದರು. ಇನ್ನು ಭದ್ರತಾ ಪಡೆ ವಾಹನಗಳ ಮೇಲೆ ಗುಂಡಿನ ದಾಳಿ ನಡೆಸಿದಾಗ ತಕ್ಷಣವೇ ಬೆಂಗಾವಲು ಪಡೆ ಸಹ ಪ್ರತಿದಾಳಿ ನಡೆಸಿತ್ತು.