ಚಿಕ್ಕಮಗಳೂರು, ಜೂ. 16(DaijiworldNews/AA): ತೈಲ ದರ ಏರಿಕೆಯಾದ್ರೆ ಬೆಲೆ ಏರಿಕೆಗೆ ಲೈಸೆನ್ಸ್ ಕೊಟ್ಟಂತೆ. ಕಷ್ಟದಲ್ಲಿರುವ ಜನರಿಗೆ ಸರ್ಕಾರ ದರ ಏರಿಕೆ ಬರೆ ಹಾಕಿದೆ. ಜನವಿರೋಧಿ ಸರ್ಕಾರ ಎನ್ನಲು ಮತ್ತಾವ್ಯ ಸರ್ಟಿಫಿಕೇಟ್ ಬೇಕಿಲ್ಲ ಎಂದು ಬಿಜೆಪಿ ಎಂಎಲ್ಸಿ ಸಿ.ಟಿ.ರವಿ ಕಿಡಿಕಾರಿದ್ದಾರೆ.
ಪೆಟ್ರೋಲ್-ಡೀಸೆಲ್ ದರ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಚಿಕ್ಕಮಗಳೂರಿನಲ್ಲಿ ದರ ಏರಿಕೆ ಬಗ್ಗೆ ಮಾತನಾಡಿದ ಸಿ.ಟಿ ರವಿ ಅವರು, ರಾಜ್ಯ ಸರ್ಕಾರ ಬೆಲೆ ಏರಿಕೆಯನ್ನೇ ನೀತಿ ಮಾಡಿಕೊಂಡಿದೆ. ಈ ಹಿಂದೆ ಮೋದಿ ಪೆಟ್ರೋಲ್ ದರ ಏರಿಸಿದ್ದಾರೆಂದು ಸಿಎಂ ಬೈಕ್ ಹೊತ್ತೊಯ್ಯುವ ಅಣುಕು ಪ್ರದರ್ಶನ ಮಾಡಿದ್ರು. ಈಗ ಯಾರನ್ನು ಹೊತ್ಕೊಂಡು ಹೋಗಬೇಕು. ನಿಮ್ಮ ಸರ್ಕಾರವನ್ನೇ ಹೊತ್ಕೊಂಡು ಹೋಗಬೇಕು ಎಂದು ಲೇವಡಿ ಮಾಡಿದ್ದಾರೆ.
ಇದು ಜನವಿರೋಧಿ ಸರ್ಕಾರ, ಸತ್ತು ಹೋಗಿರುವ ಸರ್ಕಾರ. ಜನರೇ ಈ ಸರ್ಕಾರವನ್ನು ದಫನ್ ಮಾಡೋ ದಿನ ಬರುತ್ತದೆ. ಲೋಕಸಭಾ ಚುನಾವಣೆಯ ಸೋಲಿನ ಬಳಿಕ ಕಾಂಗ್ರೆಸ್ ಸರ್ಕಾರ ಜನರ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ. ರಾಜಕೀಯ ಪಕ್ಷ, ನಾಯಕರ ಮೇಲೆ ಸೇಡು ತೀರಿಸಿಕೊಂಡ ನಂತರ ಈಗ ಜನಸಾಮಾನ್ಯರ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕೂಡಲೇ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಆದೇಶವನ್ನು ಸರ್ಕಾರ ಹಿಂಪಡೆಯಬೇಕು. ನೀವು ಮಾಡಿರೋದು ಬೆಲೆ ಏರಿಕೆ, ಲೂಟಿ ಎರಡೇ. ಬೇರೇನು ಮಾಡಿದ್ದೀರಾ? ಓಲೈಕೆ ರಾಜಕಾರಣಕ್ಕೆ ಗ್ಯಾರಂಟಿ ಆಸೆ ತೋರಿಸಿದ್ರಿ. ಅದು ಧಕ್ಕದಿದ್ದಾಗ ಬೆಲೆ ಏರಿಕೆ ಮಾಡಿದ್ದೀರಾ. ನಾಚಿಕೆ, ಮಾನ, ಮರ್ಯಾದೆ ಅನ್ನೋದಾದ್ರೆ ಯಾವುದನ್ನ ಇಟ್ಕೊಂಡು ಇದನ್ನ ಮಾಡಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.