ನವದೆಹಲಿ, ಜೂ. 16(DaijiworldNews/AA): ಲೋಕಸಭೆ ಚುನಾವಣೆ ಮುಗಿದು, ಫಲಿತಾಂಶವೂ ಪ್ರಕಟವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಕ್ಷೇತ್ರವನ್ನು ಗೆದ್ದರೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮತ್ತೆ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, "ಭಾರತದಲ್ಲಿ ಇವಿಎಂಗಳು ಎಂದರೆ ಬ್ಲ್ಯಾಕ್ ಬಾಕ್ಸ್ ಇದ್ದಂತೆ. ಅವುಗಳನ್ನು ಯಾರೂ ಪರಿಶೀಲನೆ ಮಾಡಲು, ತಪಾಸಣೆ ಮಾಡಲು ಸಾಧ್ಯವಿಲ್ಲ. ಭಾರತದ ಚುನಾವಣೆ ಪಾರದರ್ಶಕತೆ ಕುರಿತು ಗಂಭೀರವಾದ ಆತಂಕಗಳು ವ್ಯಕ್ತವಾಗುತ್ತಿವೆ. ಸಂಸ್ಥೆಗಳು ವಿಶ್ವಾಸ ಕಳೆದುಕೊಂಡರೆ ಪ್ರಜಾಪ್ರಭುತ್ವ ವ್ಯವಸ್ಥೆಯೇ ಒಂದು ನಾಟಕೀಯ ಸ್ವರೂಪ ಪಡೆಯುತ್ತದೆ" ಎಂಬುದಾಗಿ ಬರೆದುಕೊಂಡಿದ್ದಾರೆ.
"ಎಐ ಬಳಸಿ ಇವಿಎಂಗಳನ್ನು ಹ್ಯಾಕ್ ಮಾಡಬಹುದು" ಎಂದು ಟೆಸ್ಲಾ ಸಿಇಒ ಎಲಾನ್ ಮಸ್ಕ್ ಹೇಳಿರುವ ಬೆನ್ನಲ್ಲೇ ರಾಹುಲ್ ಗಾಂಧಿ ಅವರು ಇವಿಎಂ ಬಗ್ಗೆ ಈ ರೀತಿಯಾಗಿ ಪೋಸ್ಟ್ ಮಾಡಿದ್ದಾರೆ. ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟವು ಬಹುಮತ ಸಾಧಿಸಿ, ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಕಳೆದ ಚುನಾವಣೆಯಲ್ಲಿ 52 ಕ್ಷೇತ್ರ ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 99 ಕ್ಷೇತ್ರಗಳಲ್ಲಿ ಗೆದ್ದಿದೆ. ಆದರೂ ಕೂಡ ರಾಹುಲ್ ಗಾಂಧಿ ಅವರು ಇವಿಎಂ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ.