ನವದೆಹಲಿ, 16(DaijiworldNews/AK): ಶಾಲಾ ಪಠ್ಯಪುಸ್ತಕಗಳಲ್ಲಿ ಗಲಭೆಗಳ ಬಗ್ಗೆ ಪಾಠ ಮಾಡುವುದರಿಂದ ಮಕ್ಕಳಲ್ಲಿ ಹಿಂಸಾತ್ಮಕ ವ್ಯಕ್ತಿತ್ವಗಳ ನಿರ್ಮಾಣ ಆಗಬಹುದು ಎಂದು ಎನ್ಸಿಇಅರ್ಟಿ ನಿರ್ದೇಶಕ ದಿನೇಶ್ ಪ್ರಸಾದ್ ಸಕ್ಲಾನಿ ಹೇಳಿದ್ದಾರೆ.
ಗುಜರಾತ್ ಗಲಭೆ ಘಟನೆಗಳು ಮತ್ತು ಬಾಬರಿ ಮಸೀದಿ ಧ್ವಂಸ ಘಟನೆಯ ಪಠ್ಯದಲ್ಲಿ ಬದಲಾವಣೆ ಮಾಡಲಾಗಿರುವ ವಿಚಾರದ ಬಗ್ಗೆ ಅವರು ಪ್ರತಿಕ್ರಿಯಿಸಿ, ಶಿಕ್ಷಣದಲ್ಲಿ ಕೇಸರೀಕರಣ ಮಾಡಲಾಗುತ್ತಿದೆ ಎನ್ನುವ ಆರೋಪವನ್ನು ಅವರು ತಳ್ಳಿಹಾಕಿದ್ದಾರೆ.ಹನ್ನೆರಡನೇ ತರಗತಿಯ ರಾಜಕೀಯ ಶಾಸ್ತ್ರದ ಪಠ್ಯಪುಸ್ತಕದಲ್ಲಿ ಬಾಬ್ರಿ ಮಸೀದಿಯನ್ನು ಮೂರು ಗೋಪುರದ ಕಟ್ಟಡವೆಂದು ಬಣ್ಣಿಸಲಾಗಿದೆ. ಅಯೋಧ್ಯೆಯ ಪಾಠವನ್ನು ನಾಲ್ಕು ಪುಟಗಳಿಂದ ಎರಡು ಪುಟಕ್ಕೆ ಇಳಿಸಲಾಗಿದೆ. ಲಾಲಕೃಷ್ಣ ಆಡ್ವಾನಿ ನೇತೃತ್ವದಲ್ಲಿ ನಡೆದ ಬಿಜೆಪಿ ರಥಯಾತ್ರೆ ಘಟನೆಯನ್ನು ಉಲ್ಲೇಖಿಸಲಾಗಿದೆ. ಕರಸೇವಕರಿಂದ ಬಾಬ್ರಿ ಮಸೀದಿ ಕೆಡವಲಾಗಿದ್ದು ಆ ಸಂಬಂಧಿತ ಘಟನೆಗಳ ವಿವರ ಕೊಡಲಾಗಿದೆ. ವಿಪಕ್ಷಗಳ ನಾಯಕರು ಈ ಪಠ್ಯ ಪರಿಷ್ಕರಣೆಯನ್ನು ಕೇಸರೀಕರಣ ಎಂದು ಆರೋಪ ಮಾಡಿದ್ದಾರೆ.
ಯಾವುದಾದರೂ ಅಪ್ರಸ್ತುತ ವಿಷಯವಾಗಿದ್ದರೆ ಅದನ್ನು ಅಪ್ಡೇಟ್ ಮಾಡಬೇಕಾಗುತ್ತದೆ. ಬದಲಾವಣೆಯನ್ನೇ ಮಾಡಬಾರದು ಎಂದು ಹೇಳಲು ಆಗಲ್ಲ. ನಾವು ಮಕ್ಕಳಿಗೆ ಇತಿಹಾಸ ಹೇಳಿಕೊಡುವುದು ನೈಜ ಜ್ಞಾನವನ್ನು ತುಂಬಲೇ ಹೊರತು, ಘರ್ಷಣೆಗೆ ನೂಕುವುದಕ್ಕಲ್ಲ ಎಂದು ದಿನೇಶ್ ಪ್ರಸಾದ್ ಸ್ಪಷ್ಟನೆ ನೀಡಿದ್ದಾರೆ.
ರಾಮ ಮಂದಿರದ ಪರವಾಗಿ ಸುಪ್ರೀಂಕೋರ್ಟ್ ತೀರ್ಪು ಕೊಟ್ಟಿದೆ. ಅದನ್ನು ನಮ್ಮ ಪಠ್ಯಪುಸ್ತಕದಲ್ಲಿ ಸೇರಿಸಿರುವುದು ಯಾಕೆ ತಪ್ಪಾಗುತ್ತದೆ? ಹೊಸ ಸಂಸತ್ ಅನ್ನು ಕಟ್ಟಿದ್ದಾರೆ. ಅದರ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಬಾರದೇಕೆ? ಪ್ರಾಚೀನ ಘಟನೆಗಳ ಜೊತೆಗೆ ಇತ್ತೀಚಿನ ವಿದ್ಯಮಾನಗಳನ್ನೂ ಮಕ್ಕಳಿಗೆ ತಿಳಿಸುವುದು ನಮ್ಮ ಕರ್ತವ್ಯ’ ಎಂದು ಹೇಳಿದರು.