ರಾಂಚಿ, ಜೂ. 17(DaijiworldNews/AA): ಜಾರ್ಖಂಡ್ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಪೊಲೀಸರು ಹಾಗೂ ಭದ್ರತಾ ಪಡೆ ನಡೆಸಿದ ಜಂಟಿ ಎನ್ಕೌಂಟರ್ನಲ್ಲಿ 4 ಮಾವೋವಾದಿಗಳು ಸಾವನ್ನಪ್ಪಿದ್ದು, ಮೃತಪಟ್ಟ ನಕ್ಸಲರಿಂದ ಭದ್ರತಾ ಪಡೆಗಳು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ.
ಸಾವನ್ನಪ್ಪಿದವರ ಪೈಕಿ ಓರ್ವ ಮಹಿಳಾ ಮಾವೋವಾದಿಯೂ ಇದ್ದಾಳೆ. ಹಾಗೂ ಇಬ್ಬರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇಂದು ಬೆಳಿಗ್ಗೆ ನಡೆದ ಎನ್ಕೌಂಟರ್ನಲ್ಲಿ ನಮ್ಮ ಜಂಟಿ ಪಡೆಗಳು ಮಾವೋವಾದಿ ವಲಯ ಕಮಾಂಡರ್, ಉಪ-ವಲಯ ಕಮಾಂಡರ್, ಪ್ರದೇಶ ಕಮಾಂಡರ್ ಮತ್ತು ಮಹಿಳಾ ಮಾವೋವಾದಿ ಸೇರಿದಂತೆ ನಾಲ್ವರನ್ನು ಹೊಡೆದುರುಳಿಸಿವೆ. ಶೋಧ ಕಾರ್ಯಾಚರಣೆಗಳು ಇನ್ನೂ ನಡೆಯುತ್ತಿವೆ. ಕಳೆದ ವಾರ ಜಾರ್ಖಂಡ್ನ ಚತ್ರಾ ಜಿಲ್ಲೆಯಲ್ಲಿ ಸಿಪಿಐಯ ವಿಭಜಿತ ಗುಂಪು ನಿಷೇಧಿತ ತೃತೀಯಾ ಸಮ್ಮೇಳನದ ಪ್ರಸ್ತುತಿ ಸಮಿತಿಯ ಮೂವರು ಸದಸ್ಯರನ್ನು ಕಳೆದ ವಾರ ಬಂಧಿಸಿದ ನಂತರ ಈ ಘಟನೆ ನಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಶುತೋಷ್ ಶೇಖರ್ ಮಾಹಿತಿ ನೀಡಿದ್ದಾರೆ.
ಜಿಲ್ಲಾ ಪೊಲೀಸ್ ಮತ್ತು ಅರೆಸೈನಿಕ ಪಡೆಗಳ ಜಂಟಿ ತಂಡವು ಸೋಮವಾರ ಮುಂಜಾನೆ ಸರಂದಾ ಮೀಸಲು ಅರಣ್ಯದೊಳಗಿನ ಲುಕುಂಗ್ ರೈಕೆಲಾ ಅರಣ್ಯಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿತ್ತು. ದಟ್ಟವಾದ ಅರಣ್ಯ ಪ್ರದೇಶದಲ್ಲಿ ಅಡಗಿದ್ದ ಮಾವೋವಾದಿಗಳು ಇದ್ದಕ್ಕಿದ್ದಂತೆ ದಾಳಿ ನಡೆಸಿದ್ದರು. ಈ ವೇಳೆ ಎನ್ಕೌಂಟರ್ ಆರಂಭವಾಗಿತ್ತು ಎಂದು ತಿಳಿದುಬಂದಿದೆ.