ಹುಬ್ಬಳ್ಳಿ, ಮೇ13(Daijiworld News/SS): ಸಿದ್ದರಾಮಯ್ಯ ನನಗೆ ಅಣ್ಣನ ಸಮಾನ, ಅವರ ಆಶೀರ್ವಾದ ಇರೋವರೆಗೂ ಸಮ್ಮಿಶ್ರ ಸರಕಾರ ಸುಭದ್ರವಾಗಿರುತ್ತೆ. ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಮರುಚುನಾವಣೆಯ ಪ್ರಚಾರದ ವೇಳೆ ಮಾತನಾಡಿದ ಅವರು, ಮಾಧ್ಯಮದ ವರದಿಯಿಂದ ನಾನು ಹೆದರೋದಿಲ್ಲ. ಮಾಧ್ಯಮಗಳು ಬಿಜೆಪಿ ನಾಯಕರ ಮಾತು ಕೇಳಿ ಗಡುವಿನ ಧಾರಾವಾಹಿ ಪ್ರಸಾರ ಮಾಡುತ್ತಿದೆ. ಸಾಲ ಮನ್ನಾ ಮಾಡೋ ವಿಚಾರದಲ್ಲಿ ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ಧಾರವಾಡ ಜಿಲ್ಲೆಗೆ 290 ಕೋಟಿ ಅನುದಾನ ನೀಡಿದ್ದೇವೆ. ಬಿಜೆಪಿ ಮುಖಂಡರಿಗೆ ನಾಚಿಕೆ ಆಗಬೇಕು. 45 ಸಾವಿರ ಕೋಟಿ ಸಾಲ ಮನ್ನಾ ಮಾಡಿದ ಏಕೈಕ ಸರಕಾರ ಅಂದ್ರೆ ಅದು ದೋಸ್ತಿ ಸರಕಾರ ಎಂದು ಹೇಳಿದರು.
ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ಅವರು ಹಾಕಿಕೊಂಡಿದ್ದ ಅನೇಕ ಯೋಜನೆಗಳನ್ನು ನಾವು ಮುಂದುವರೆಸಿದ್ದೇವೆ. ರೈತರು ಕಟಾವು ಮಾಡಿದ ಬೆಳೆಯನ್ನ ಸಾಗಾಟ ಮಾಡೋದಕ್ಕೂ ಹಣ ನೀಡುವ ಯೋಜನೆ ಈ ವರ್ಷದಿಂದ ಪ್ರಾರಂಭ ಆಗಲಿದೆ. ಬೆಳೆ ಮಾರಾಟ ಆಗದೇ ಇದ್ದಾಗ ಮುಂಗಡ ಹಣ ಕೊಡುವ ವ್ಯವಸ್ಥೆ ಇದೆ. ನಮ್ಮ ಸರಕಾರಕ್ಕೆ ಗಡುವು ಕೊಡುತ್ತಿರುವ ಬಿಜೆಪಿಗರ ಅಡೆ ತಡೆ ನಡುವೆಯೂ ಅನೇಕ ಜನಪರ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಬಡ್ಡಿ ಮನ್ನಾ ಬಗ್ಗೆ ಕೇಂದ್ರ ಸರಕಾರ ದೋಖಾ ಮಾಡುತ್ತಿದೆ. ಡಿಕೆಶಿ ಅವರನ್ನ ರೌಡಿಜಂ ಮಾಡಲು ಕರೆತಂದಿಲ್ಲ. ಕುಸುಮಕ್ಕ ಅವರನ್ನ ಗೆಲ್ಲಿಸಲು ಅವರು ಬಂದಿದ್ದಾರೆ. ಬಡವರನ್ನ ನೋಡಿದಾಗ ನಮಗೆ ಕಣ್ಣೀರು ಬರುತ್ತೆ. ಡಿಕೆಶಿ ಅವರ ಕಣ್ಣಲ್ಲಿ ಎಂದೂ ನೀರು ಬಂದಿರಲಿಲ್ಲ. ಜನರ ಕಷ್ಟ ನೋಡಿದಾಗ ಸಹಜವಾಗಿಯೇ ಕಣ್ಣೀರು ಬರುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.