ಲಕ್ನೋ, ಜೂ. 18(DaijiworldNews/AK):ಕಿಸಾನ್ ನಿಧಿಯನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದಾರೆ. ದೇಶದ ಒಟ್ಟು 9.26 ಕೋಟಿ ರೈತರ ಖಾತೆಗಳಿಗೆ 20 ಸಾವಿರ ಕೋಟಿ ರೂ. ಬಿಡುಗಡೆ ಮಾಡಿದರು.
ಮೂರನೇ ಬಾರಿಗೆ ಪ್ರಧಾನಿಯಾದ ನಂತರ ಪಿಎಂ ಕಿಸಾನ್ ನಿಧಿಗೆ ಸಂಬಂಧಿಸಿದ ಕಡತಕ್ಕೆ ಮೋದಿ ಮೊದಲ ಸಹಿ ಹಾಕಿದ್ರು. ಇಂದು ಸ್ವಕ್ಷೇತ್ರದಲ್ಲಿ ನಡೆದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಸಮ್ಮೇಳನದಲ್ಲಿ, ಕೃಷಿ ಸಖಿಯರಾಗಿ ತರಬೇತಿ ಹೊಂದಿದ ಸ್ವಯಂ ಸಹಾಯಕ ತಂಡಗಳ ಮಹಿಳೆಯರಿಗೆ ಮೋದಿ ಪ್ರಮಾಣಪತ್ರ ವಿತರಿಸಿದರು. ಬಳಿಕ ವಾರಣಾಸಿಯ ದಶಾಶ್ವಮೇಧ ಘಾಟ್ನಲ್ಲಿ ನಡೆಯುವ ಗಂಗಾರತಿಯಲ್ಲಿ ಪ್ರಧಾನಿ ಮೋದಿ ಭಾಗಿಯಾದರು.
ಇದೇ ವೇಳೆ ವಾರಣಾಸಿಯಲ್ಲಿ ನಡೆದ ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನದಲ್ಲಿ ಮಾತನಾಡಿದ ಅವರು, ಮೂರನೇ ಅವಧಿಯಲ್ಲಿ ರೈತರು ಮತ್ತು ಬಡವರಿಗೆ ಸಂಬಂಧಿಸಿದ ಮೊದಲ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದರು.ದೇಶದಲ್ಲಿ ಬಡವರಿಗಾಗಿ ಮೂರು ಕೋಟಿ ಮನೆ ನಿರ್ಮಾಣ ಮಾಡುವ ಗುರಿ ಇದೆ. ಕಿಸಾನ್ ಸಮ್ಮಾನ್ ನಿಧಿ ಮುಂದುವರಿಸಲು ನಿರ್ಧಾರ ಕೈಗೊಂಡಿದ್ದೇವೆ. ಈ ಯೋಜನೆಯು ಕೋಟ್ಯಂತರ ಜನರಿಗೆ ಲಾಭ ಮಾಡಲಿದೆ. ಇಂದು ಕೋಟ್ಯಂತರ ರೈತರು ನಮ್ಮ ಜೊತೆಗೆ ಸೇರಿದ್ದಾರೆ ಎಂದರು.
ಕಿಸಾನ್ ಸಮ್ಮಾನ್ ನಿಧಿ ವಿಶ್ವದ ಅತಿದೊಡ್ಡ ಡಿಬಿಟಿ ಯೋಜನೆಯಾಗಿದೆ. ತಂತ್ರಜ್ಞಾನ ಬಳಸಿಕೊಂಡು ಫಲಾನುಭವಿಗೆ ನೇರ ಸರ್ಕಾರದ ಯೋಜನೆ ತಲುಪಿಸುತ್ತಿದೆ. ಯೋಜನೆಗೆ ಸೇರಲು ನಿಯಮಗಳನ್ನು ಇನ್ನಷ್ಟು ಸಡಿಲಿಸಲಾಗಿದೆ. ಕೃಷಿಯಲ್ಲಿ ನಾವು ಇನ್ನಷ್ಟು ಸ್ವಾವಲಂಬಿಯಾಗಬೇಕಿದೆ ಎಂದು ನುಡಿದರು.ಭಾರತದ ಹಲವಾರು ತರಕಾರಿ ವಿದೇಶಿ ಮಾರುಕಟ್ಟೆ ತಲುಪುತ್ತಿದೆ. ಒಂದು ಜಿಲ್ಲೆ, ಒಂದು ಉತ್ಪನ್ನ ಯೋಜನೆಯಿಂದ ರಫ್ತು ಹೆಚ್ಚುತ್ತಿದೆ. ವಿಶ್ವದ ಪ್ರತಿ ಡೈನಿಂಗ್ ಟೇಬಲ್ ಮೇಲೆ ಭಾರತದ ಒಂದಲ್ಲ ಒಂದು ಉತ್ಪನ್ನ ಇರಬೇಕು ಎನ್ನುವುದು ನನ್ನ ಗುರಿ ಎಂದು ಅವರು ತಿಳಿಸಿದರು.
ಇನ್ನು ಕೃಷಿ ಸಖಿ ಯೋಜನೆ ಮೂಲಕ ಮಹಿಳೆಯರನ್ನು ಕೃಷಿಯಲ್ಲಿ ಗುರುತಿಸಲಾಗುವುದು. ಇದು ಲಕ್ ಪತಿ ದೀದಿಯನ್ನಾಗಿಸಲು ಅನುಕೂಲವಾಗಲಿದೆ ಎಂದರು. ಡೈರಿಗಳ ನಿರ್ಮಾಣದಿಂದ ರೈತರ ಬದುಕು ಬದಲಾಗಿದೆ. ಹಾಲಿನ ಉತ್ಪನ್ನ ದೊಡ್ಡ ಪ್ರಮಾಣ ಹೆಚ್ಚಾಗಿದೆ. ರೈತರಿಗೆ ಆರ್ಥಿಕವಾಗಿ ಶಕ್ತಿ ತುಂಬಿದೆ. 40 ಸಾವಿರ ಜನರು ಸೋಲಾರ್ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ.