ಅಯೋಧ್ಯೆ, ಜೂ. 19(DaijiworldNews/AA): ರಾಮ ಮಂದಿರದ ಆವರಣದಲ್ಲಿ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಭದ್ರತಾ ಸಿಬ್ಬಂದಿ ತಮ್ಮದೇ ಬಂದೂಕಿನಿಂದಲೇ ಹಾರಿದ ಗುಂಡು ತಗುಲಿ ಸಾವನ್ನಪ್ಪಿದ್ದಾರೆ.
ಮೃತ ಯೋಧನನ್ನು ಉತ್ತರ ಪ್ರದೇಶದ ಅಂಬೇಡ್ಕರ್ ನಗರದ ನಿವಾಸಿಯಾದ ಶತ್ರುಘ್ನ ವಿಶ್ವಕರ್ಮ (25) ಎಮದು ಗುರುತಿಸಲಾಗಿದೆ.
ಶತ್ರುಘ್ನ ವಿಶ್ವಕರ್ಮ ಅವರು ಯುಪಿಎಸ್ಎಸ್ಎಫ್ನ ಪೇದೆಯಾಗಿದ್ದರು. ಶತ್ರುಘ್ನ ಅವರು ಆಕಸ್ಮಿಕವಾಗಿ ಗುಂಡು ಹಾರಿ ಮೃತಪಟ್ಟಿದ್ದಾರೋ ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಎಂಬ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಬೆಳಗ್ಗೆ ಈ ದುರ್ಘಟನೆ ಸಂಭವಿಸಿದೆ. ಶತ್ರುಘ್ನ ಅವರ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿದ್ದು, ಅದು ಅವರಿಗೇ ತಗುಲಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ದಾಗಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ರಾಮಮಂದಿರದ ಗರ್ಭಗುಡಿಯಿಂದ 150ಮೀಟರ್ ದೂರವಿರುವ ಕೋಟೇಶ್ವರ ದೇವಾಲಯದ ಎದುರು ವಿಐಪಿ ಗೇಟ್ ನಿರ್ಮಿಸಲಾಗುತ್ತಿದೆ. ಅಲ್ಲಿ ಶತ್ರುಘ್ನ ವಿಶ್ವಕರ್ಮ ಅವರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಘಟನೆ ಸಂದರ್ಭ ಹಲವು ಭದ್ರತಾ ಸಿಬ್ಬಂದಿ ಕೂಡ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.
ಶತ್ರುಘ್ನ ವಿಶ್ವಕರ್ಮ ಅವರು 2019ರಲ್ಲಿ ಯುಪಿಎಸ್ಎಸ್ಎಫ್ಗೆ ಸೇರ್ಪಡೆಗೊಂಡಿದ್ದರು. ಇತ್ತೀಚೆಗಷ್ಟೇ ಅವರನ್ನು ರಾಮಮಂದಿರದ ಭದ್ರತೆಗಾಗಿ ನಿಯೋಜಿಸಲಾಗಿತ್ತು ಎನ್ನಲಾಗಿದೆ.