ಮಧ್ಯಪ್ರದೇಶ, ಮೇ13(Daijiworld News/SS): ಪ್ರಸಿದ್ಧ ಮಹಾಕಾಲೇಶ್ವರ ದೇವಾಲಯಕ್ಕೆ ತೆರಳಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಸನ್ನಿಧಿಯಲ್ಲಿ ದೇವರಿಗೆ ವಿಶೆಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್, ಕೇಂದ್ರದ ಮಾಜಿ ಸಚಿವ ಸುರೇಶ್ ಪಚೌರಿ ಮತ್ತು ಇತರ ನಾಯಕರು ಪ್ರಿಯಾಂಕ ಜತೆಗೆ ದೇವಾಲಯಕ್ಕೆ ತೆರಳಿದ್ದರು. ಪ್ರಿಯಾಂಕಾ ಕೆಂಪು ಸೀರೆ ಉಟ್ಟಿದ್ದರೆ, ಆಕೆ ಪಕ್ಕದಲ್ಲಿ ಇದ್ದ ಕಮಲ್ ನಾಥ್ ಒಟ್ಟಾರೆ ಕೇಸರಿ ದಿರಿಸು ಧರಿಸಿದ್ದರು. ಪ್ರಿಯಾಂಕಾ ಗಾಂಧಿ ಒಂದು ಗಂಟೆಗೂ ಹೆಚ್ಚು ಕಾಲ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿದ ನಂತರ ಅವರು ನಡೆಸಿದ ರೋಡ್ ಶೋ ನಡೆಸಿದ್ದಾರೆ. ಈ ರೋಡ್ ಶೋಗೆ ಭಾರೀ ಬೆಂಬಲ ವ್ಯಕ್ತವಾಯಿತು ಎಂದು ಕಾಂಗ್ರೆಸ್ ರಾಜ್ಯ ವಕ್ತಾರರಾದ ಶೋಭಾ ಓಜಾ ತಿಳಿಸಿದ್ದಾರೆ.
ಉತ್ತರಪ್ರದೇಶದ ಪೂರ್ವ ಭಾಗದ ಉಸ್ತುವಾರಿಯನ್ನು ಪ್ರಿಯಾಂಕಾ ಗಾಂಧಿ ವಹಿಸಿಕೊಂಡ ನಂತರ ಅವರ ರಾಜಕೀಯ ಜೀವನದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಇದಕ್ಕೂ ಮುನ್ನ ಅವರು ತಮ್ಮ ಕುಟುಂಬದ ಪರವಾಗಿ ಚುನಾವಣೆ ಪ್ರಚಾರ ನಡೆಸುತ್ತಿದ್ದರು ಮತ್ತು ಪಕ್ಷಕ್ಕೆ ಸಲಹೆಗಾರ್ತಿಯಾಗಿ ಅಧಿಕೃತ ಹುದ್ದೆಗಳಿಲ್ಲದೆ ಕಾರ್ಯ ನಿರ್ವಹಿಸುತ್ತಿದ್ದರು.
ಕೊನೆಯ ಹಂತದ ಮತದಾನಕ್ಕೆ ದಿನಗಣನೆ ಆರಂಭವಾಗಿದ್ದು, ಕಾಂಗ್ರೆಸ್, ಬಿಜೆಪಿ ಸೇರಿದಂತೆ ಅನೇಕ ಪಕ್ಷಗಳು ಹಾಗೂ ಪಕ್ಷೇತರ ಅಭ್ಯರ್ಥಿಗಳು ಭರ್ಜರಿ ಪ್ರಚಾರ ನಡೆಸಿದ್ದಾರೆ.
ಕೊನೆಯ ಹಂತದ ಮತದಾನವು ಮೇ 19ರಂದು ನಡೆಯಲಿದೆ. ಅಂದು ಮಧ್ಯಪ್ರದೇಶದ ಇಂದೋರ್, ಉಜ್ಜೈನಿ, ರತ್ಲಂ ಸೇರಿದಂತೆ 8 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಲೋಕಸಭಾ ಚುನಾವಣೆ ಫಲಿತಾಂಶ ಮೇ 23ರಂದು ಹೊರ ಬೀಳಲಿದೆ.