ನವದೆಹಲಿ, ಜೂ 20 (DaijiworldNews/ AK): ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ್ದ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಕಳೆದ ತಿಂಗಳು ಬಂಧನಕ್ಕೊಳಗಾದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಾಮಾನ್ಯ ಜಾಮೀನು ಅರ್ಜಿ ವಿಚಾರಣೆ ನಡೆಸಿದ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಗುರುವಾರ ತೀರ್ಪನ್ನು ಕಾಯ್ದಿರಿಸಿತ್ತು. ನ್ಯಾಯಾಧೀಶರಾದ ನಿಯಯ್ ಬಿಂದು ಎರಡು ದಿನಗಳ ಕಾಲ ಈ ಪ್ರಕರಣದ ಸುದೀರ್ಘ ವಿಚಾರಣೆ ಆಲಿಸಿ ಇಂದು ಜಾಮೀನು ಮಂಜೂರು ಮಾಡಿದರು.
ಮೇಲ್ಮನವಿ ಸಲ್ಲಿಸುವ ಉದ್ದೇಶದಿಂದ ಜಾಮೀನು ಬಾಂಡ್ಗೆ ಸಹಿ ಹಾಕಲು 48 ಗಂಟೆಗಳ ಕಾಲಾವಕಾಶ ನೀಡುವಂತೆ ಇಡಿ ಮನವಿ ಮಾಡಿತ್ತು. ಈ ಮನವಿಯನ್ನು ತಿರಸ್ಕರಿಸಿದ ಕೋರ್ಟ್ ಶುಕ್ರವಾರ 1 ಲಕ್ಷ ರೂ. ಬಾಂಡ್ ಸಲ್ಲಿಕೆಗೆ ಕೇಜ್ರಿವಾಲ್ ಪರ ವಕೀಲರಿಗೆ ಸೂಚನೆ ನೀಡಿತು. ಎಲ್ಲಾ ಪ್ರಕ್ರಿಯೆಗಳು ಸರಿಯಾಗಿ ಮುಗಿದರೆ ಕೇಜ್ರಿವಾಲ್ ನಾಳೆ ಜೈಲಿನಿಂದ ಹೊರ ಬರುವ ಸಾಧ್ಯತೆಯಿದೆ.
ಲೋಕಸಭಾ ಚುನಾವಣೆಯ ಸಮಯದಲ್ಲಿ ಸುಪ್ರೀಂ ಕೋರ್ಟ್ ಅರವಿಂದ್ ಕೇಜ್ರಿವಾಲ್ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಜೂನ್ 2 ರಂದು ಕೇಜ್ರಿವಾಲ್ ಮರಳಿ ದೆಹಲಿಯ ತಿಹಾರ್ ಜೈಲಿಗೆ ಹೋಗಿದ್ದರು.