ನವದೆಹಲಿ, ಜೂ 21 (DaijiworldNews/MS): ಅಬಕಾರಿ ನೀತಿ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ಗೆ ಹಿನ್ನಡೆಯಾಗಿದ್ದು, ಜಾರಿ ನಿರ್ದೇಶನಾಲಯದ ಅರ್ಜಿಯ ವಿಚಾರಣೆಯ ತನಕ ದೆಹಲಿ ಹೈಕೋರ್ಟ್ ಅವರ ಬಿಡುಗಡೆ ಆದೇಶವನ್ನು ತಡೆಹಿಡಿದಿದೆ. ಕೇಜ್ರಿವಾಲ್ ಅವರು ತಿಹಾರ್ ಜೈಲಿನಿಂದ ಬಿಡುಗಡೆಯಾಗುವ ಕೆಲವೇ ಗಂಟೆಗಳ ಮೊದಲು ಇಡಿ ಇಂದು ಕೇಜ್ರಿವಾಲ್ ಅವರ ಜಾಮೀನನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಿತ್ತು.
ಕೇಜ್ರಿವಾಲ್ ಗೆ ಗುರುವಾರ ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದು, ಅದರಂತೆ ಶುಕ್ರವಾರ ಜೈಲಿನಿಂದ ಬಿಡುಗಡೆಯಾಗುವ ನಿರೀಕ್ಷೆಯಲ್ಲಿದ್ದರು. ಈ ಮಧ್ಯೆ ಇ.ಡಿ ಹೈಕೋರ್ಟ್ ಮೆಟ್ಟಿರೇಲಿದೆ.
ನ್ಯಾಯಮೂರ್ತಿಗಳಾದ ಸುಧೀರ್ ಕುಮಾರ್ ಜೈನ್ ಮತ್ತು ರವೀಂದರ್ ದುಡೇಜಾ ಅವರ ಪೀಠದ ಮುಂದೆ ತುರ್ತು ವಿಚಾರಣೆಗಾಗಿ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಇಡಿ ತನ್ನ ಅರ್ಜಿಯನ್ನು ಉಲ್ಲೇಖಿಸಿದ್ದು, ಪ್ರಕರಣದ ಅರ್ಜಿ 10-15 ನಿಮಿಷಗಳಲ್ಲಿ ತನಗೆ ಬರಲಿದೆ ಮತ್ತು ನಂತರ ವಿಷಯವನ್ನು ಆಲಿಸುವುದಾಗಿ ಹೇಳಿದೆ.ಅಲ್ಲಿಯವರೆಗೂ ವಿಚಾರಣಾ ನ್ಯಾಯಾಲಯದ ಆದೇಶದ ಪ್ರಕಾರ ಕ್ರಮಕೈಗೊಳ್ಳುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.