ನವದೆಹಲಿ, ಮೇ 14 (Daijiworld News/MSP): ಬೆಂಗಳೂರು ಮೂಲದ ಎನ್ ಜಿ ಒ ಇನ್ಪೋಸಿಸ್ ಪ್ರತಿಷ್ಠಾನದ ಎಫ್ಸಿಆರ್ಎ ನೋಂದಣಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಪ್ರತಿಷ್ಠಾನವೂ ಯಾವುದೇ ವಿದೇಶಿ ದೇಣಿಗೆ ಪಡೆಯುತ್ತಿಲ್ಲವಾದ್ದರಿಂದ ಎಫ್ಸಿಆರ್ಎ ನೋಂದಣಿ ರದ್ದು ಮಾಡುವಂತೆ ಕೋರಿದ್ದೆವು. ಅದರ ಪ್ರಕಾರ ರದ್ದಾಗಿದೆ ಎಂದು ಪೌಂಡೇಷನ್ ಪ್ರತಿಕ್ರಿಯಿಸಿದೆ. ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ (ಎಫ್ಸಿಆರ್ಎ) ಉಲ್ಲಂಘನೆ ಆರೋಪದ ಮೇಲೆ ನೋಂದಣಿ ರದ್ದುಪಡಿಸಲಾಗಿದೆ ಎಂದು ಇದಕ್ಕೂ ಮೊದಲು ಅಧಿಕಾರಿಯೊಬ್ಬರು ತಿಳಿಸಿದ್ದರು. ಆ ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಚಿವಾಲಯದ ವಕ್ತಾರ, ಪ್ರತಿಷ್ಠಾನವು ಯಾವುದೇ ನಿಯಮ ಉಲ್ಲಂಘಿಸಿಲ್ಲ ಎಂದು ತಿಳಿಸಿದ್ದಾರೆ.
ವಿದೇಶಿ ದೇಣಿಗೆ ಪಡೆಯಲು ಸರ್ಕಾರಿಯೇತರ ಎಲ್ಲಾ ಸಂಘ ಸಂಸ್ಥೆಗಳು (ಎನ್ಜಿಒ) ‘ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆಯಡಿ‘ನಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ. ಪ್ರತಿಷ್ಠಾನವು 2016ರ ಜನವರಿ 1 ರಂದು ಈ ಕಾಯ್ದೆಯಡಿ ನೋಂದಾಯಿಸಿಕೊಂಡಿತ್ತು. 2016, 2017 ಮತ್ತು 2018ನೇ ಹಣಕಾಸು ವರ್ಷದ ವಾರ್ಷಿಕ ಲೆಕ್ಕಪತ್ರಗಳನ್ನು ಸಲ್ಲಿಸಲಾಗಿದೆ. ಯಾವುದೇ ವಿದೇಶಿ ದೇಣಿಗೆ ಪಡೆದಿಲ್ಲ ಎನ್ನುವುದಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಪತ್ರಗಳನ್ನೂ ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಈ ಕಾಯ್ದೆಯಡಿಯಲ್ಲಿ ನೋಂದಣಿ ಮಾಡಿಕೊಂಡಿರುವವರು ಪ್ರತಿ ಹಣಕಾಸು ವರ್ಷದ ವರಮಾನ ಮತ್ತು ವೆಚ್ಚದ ಮಾಹಿತಿಗಳನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು. ವಿದೇಶಿ ದೇಣಿಗೆ ಪಡೆಯದೇ ಇದ್ದರೂ ಆ ನಿರ್ದಿಷ್ಟ ಹಣಕಾಸು ವರ್ಷಕ್ಕೆ ಲೆಕ್ಕಪತ್ರದ ಮಾಹಿತಿ ನೀಡಲೇಬೇಕು ಎನ್ನುವ ನಿಯಮ ಇದೆ.
1996ರಲ್ಲಿ ಸ್ಥಾಪನೆಯಾಗಿರುವ ಇನ್ಫೊಸಿಸ್ ಪ್ರತಿಷ್ಠಾನವು ಶಿಕ್ಷಣ, ಗ್ರಾಮೀಣ ಅಭಿವೃದ್ದಿ, ಆರೋಗ್ಯ ಸೇವೆ, ಕಲೆ ಮತ್ತು ಸಂಸ್ಕೃತಿಯಂತಹ ಸಾಮಾಜಿಕ ಕಾರ್ಯಗಳಿಗೆ ಬೆಂಬಲ ನೀಡುತ್ತಾ ಬಂದಿದೆ. ಇನ್ಫೊಸಿಸ್ನ ಸಹ ಸ್ಥಾಪಕರಾದ ಎನ್. ಆರ್. ನಾರಾಯಣಮೂರ್ತಿ ಅವರ ಪತ್ನಿ ಸುಧಾ ಮೂರ್ತಿ ಅವರು ಈ ಪ್ರತಿಷ್ಠಾನದ ಅಧ್ಯಕ್ಷೆಯಾಗಿದ್ದಾರೆ.