ಲಕ್ನೋ, ಜೂ. 21 (DaijiworldNews/AA): ನೀಟ್ ಮತ್ತು ಯುಜಿಸಿ ನೆಟ್ ಪರೀಕ್ಷೆಗಳಲ್ಲಿ ಅಕ್ರಮ ನಡೆದಿರುವುದು ಪತ್ತೆಯಾದ ಬೆನ್ನಲ್ಲೇ ಈ ರೀತಿಯ ಪ್ರಕರಣಗಳನ್ನು ತಡೆಗಟ್ಟಲು ಕಠಿಣ ಕಾನೂನು ಕ್ರಮ ರೂಪಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧಾರ ಮಾಡಿದೆ.
ಪರೀಕ್ಷಾ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ, ಭಾರೀ ದಂಡ, ಬುಲ್ಡೋಜರ್ ಕ್ರಮ ಮತ್ತು ಜೈಲು ಶಿಕ್ಷೆಗೆ ಒಳಪಡಿಸುವ ಬಗ್ಗೆ ಯೋಗಿ ಸರ್ಕಾರ ಚರ್ಚೆ ನಡೆಸುತ್ತಿದೆ. ಯುಜಿಸಿ- ನೆಟ್ ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ರದ್ದುಗೊಳಿಸಿದ ಬೆನ್ನಲ್ಲೇ ಉತ್ತರ ಪ್ರದೇಶ ಸರ್ಕಾರದಿಂದ ಈ ಬಗ್ಗೆ ಪ್ರಕಟಣೆ ಹೊರಡಿಸಿದೆ.
ಉತ್ತರ ಪ್ರದೇಶ ಸರ್ಕಾರ ಹೊರಡಿಸಿದ ಪ್ರಕಟಣೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ಪ್ರತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಕನಿಷ್ಠ ಎರಡು ವಿಭಿನ್ನ ಸೆಟ್ ತಯಾರಿಸುವುದು. ಪ್ರತ್ಯೇಕ ಏಜೆನ್ಸಿಗಳಿಂದ ಮುದ್ರಿಸಲಾಗುವುದು. ಅಲ್ಲದೇ ಪೇಪರ್ ಕೋಡಿಂಗ್ ಕಾರ್ಯ ವಿಧಾನಗಳನ್ನು ಹೆಚ್ಚು ವ್ಯವಸ್ಥಿತವಾಗಿ ಜಾರಿಗೆ ತರುವಂತೆ ತಿಳಿಸಲಾಗಿದೆ.
ಸರ್ಕಾರಿ ಪ್ರೌಢಶಾಲೆಗಳು, ಪದವಿ ಕಾಲೇಜುಗಳು, ವಿಶ್ವವಿದ್ಯಾನಿಲಯಗಳು, ಪಾಲಿಟೆಕ್ನಿಕ್ ಗಳು, ಎಂಜಿನಿಯರಿಂಗ್ ಕಾಲೇಜುಗಳು, ವೈದ್ಯಕೀಯ ಕಾಲೇಜುಗಳು ಅಥವಾ ಸರಿಯಾದ ದಾಖಲೆಗಳೊಂದಿಗೆ ಪ್ರತಿಷ್ಠಿತ, ಉತ್ತಮ ಅನುದಾನಿತ ಶಿಕ್ಷಣ ಸಂಸ್ಥೆಗಳನ್ನು ಮಾತ್ರ ಪರೀಕ್ಷಾ ಕೇಂದ್ರಗಳನ್ನಾಗಿ ಮಾಡಲಾಗುತ್ತದೆ. ಈ ಕೇಂದ್ರಗಳು ಸಿಸಿಟಿವಿ ವ್ಯವಸ್ಥೆಯ ಕಣ್ಗಾವಲಿನಲ್ಲಿ ಪರೀಕ್ಷೆ ನಡೆಸಲಾಗುತ್ತದೆ ಎಂದು ಸರ್ಕಾರ ಹೇಳಿದೆ.