ಮುಂಬೈ, ಜೂ. 21 (DaijiworldNews/AA): 17 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಅಟಲ್ ಸೇತುವೆಗೆ ಐದು ತಿಂಗಳ ಹಿಂದಷ್ಟೇ ಚಾಲನೆ ಸಿಕ್ಕಿತ್ತು. ಇದೀಗ ಚಾಲನೆ ಸಿಕ್ಕ ಐದೇ ತಿಂಗಳಲ್ಲಿ ಈ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಇದಕ್ಕೆ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆದಿರುವುದೇ ಕಾರಣ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಸೇತುವೆ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಳೆ ಅವರು ಪೋಸ್ಟ್ ಹಂಚಿಕೊಂಡಿದ್ದಾರೆ. ಅವರು ಈ ರಸ್ತೆ ಮೇಲೆ ಸಂಚರಿಸಿ, ಬಿರುಕು ಬಿಟ್ಟ ಜಾಗವನ್ನು ಜನರಿಗೆ ತೋರಿಸಿ ರಸ್ತೆ ಸುರಕ್ಷತೆಯನ್ನು ಪರಿಶೀಲಿಸಿದ್ದಾರೆ. ಹಾಗೆಯೇ, ಭಾರಿ ಭ್ರಷ್ಟಾಚಾರ ನಡೆದಿದೆ ಎಂಬುದಾಗಿ ತಿಳಿಸಿದ್ದಾರೆ.
ನವಿ ಮುಂಬೈನ ಉಲ್ವೆ ಕಡೆ ಹೋಗುವ ಸೇತುವೆ ಮಾರ್ಗದಲ್ಲಿ ಬಿರುಕು ಕಾಣಿಸಿಕೊಂಡಿವೆ. "ನಾನು ಬರೀ ಆರೋಪ ಮಾಡುವ ಬದಲು ನಿಜವಾಗಿಯೂ ಏನಾಗಿದೆ ಎಂಬುದನ್ನು ಜನರಿಗೆ ತೋರಿಸಲು ಬಂದಿದ್ದೇನೆ. ಸರ್ಕಾರವು ಜನರ ಪರವಾಗಿ ಕೆಲಸ ಮಾಡುತ್ತೇನೆ ಎಂದು ಹೇಳುತ್ತದೆ. ಆದರೆ, ಇಲ್ಲಿ ಎಷ್ಟರಮಟ್ಟಿಗೆ ಭ್ರಷ್ಟಾಚಾರ ನಡೆದಿದೆ ಎಂಬುದನ್ನು ನೋಡಿ. ಸೇತುವೆ ಮೇಲಿನ ರಸ್ತೆ ಬಿರುಕು ಬಿಟ್ಟಿದೆ. ಸರ್ಕಾರವು ಜನರ ದುಡ್ಡನ್ನು ಜೇಬಿಗೆ ಇಳಿಸಿಕೊಂಡು, ಜನರ ಪ್ರಾಣವನ್ನು ಅಪಾಯಕ್ಕೆ ತಳ್ಳುತ್ತಿದೆ. ಇಂತಹ ಭ್ರಷ್ಟ ಸರ್ಕಾರವನ್ನು ಜನ ಕಿತ್ತೆಸೆಯಬೇಕು. ಸೇತುವೆಗೆ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿಟ್ಟಿದ್ದಾರೆ. ನಮಗೆ ಅವರ ಬಗ್ಗೆ ಗೌರವ ಇದೆ. ಆದರೆ, ಅವರ ಹೆಸರಿನ ಸೇತುವೆ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ. ಮೋದಿ ಅವರು ಈ ಕುರಿತು ಗಮನಿಸಬೇಕು" ಎಂದು ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.