ಹರಿಯಾಣ, ಜೂ. 22(DaijiworldNews/AA): ಕನಸು ನನಸಾಗಿಸಿಕೊಳ್ಳಲು ಎಂತಾ ತ್ಯಾಗಕ್ಕೂ ಸಿದ್ಧರಾಗಿರಬೇಕು. ಹಾಗೆ ಅಂತಹ ತ್ಯಾಗವನ್ನು ಮಾಡಿ ಅದಕ್ಕೆ ಪ್ರತಿಫಲ ಸಿಕ್ಕಾಗ ಮಾತ್ರ ನಮ್ಮ ತ್ಯಾಗಕ್ಕೆ ತಕ್ಕ ಪ್ರತಿಫಲ ದೊರೆತಂತಾಗುತ್ತದೆ. ಹೀಗೆ ಐಪಿಎಸ್ ಅಧಿಕಾರಿಯಾಗಲು ತನ್ನ ಸರ್ಕಾರಿ ವೈದ್ಯ ವೃತ್ತಿಯನ್ನು ತೊರೆದ ಡಿ.ರಾಜೇಶ್ ಮೋಹನ್ ಅವರ ಯಶೋಗಾಥೆ ಇದು.
ಮೂಲತಃ ಹರಿಯಾಣದವಾರದ ಡಾ. ರಾಜೇಶ್ ಮೋಹನ್ ಅವರು ಶ್ರೀಮಂತ ಕುಟುಂಬದಲ್ಲಿ ಜನಿಸಿದವರು. ವೈದ್ಯಕೀಯ ಪದವೀಧರರಾದ ಡಾ. ರಾಜೇಶ್ ಮೋಹನ್ ಅವರು 2012 ರಲ್ಲಿ ಚಂಡೀಗಢದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ನಿರ್ವಹಿಸುತ್ತಿದ್ದರು. ಅವರ ಉದ್ಯೋಗದ ಸಮಯದಲ್ಲಿಯೂ ಸಹ, ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ಸಹಾಯವನ್ನು ಮಾಡುತ್ತಿದ್ದರು. ಈ ದಿನಗಳಲ್ಲೇ ಹಿಂದುಳಿದವರಿಗೆ ಸೇವೆ ಸಲ್ಲಿಸುವ ಆಳವಾದ ತುಡಿತದಿಂದ ಪ್ರೇರೇಪಣೆಗೊಂಡ ಅವರು ವೈದ್ಯನಿಂದ ಐಪಿಎಸ್ ಅಧಿಕಾರಿಯಾಗಲು ನಿರ್ಧರಿಸಿದರು.
ನಂತರ ಡಾ ರಾಜೇಶ್ ಮೋಹನ್ ಅವರು ತಮ್ಮ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ, ಯುಪಿಎಸ್ಸಿ ಪರೀಕ್ಷೆಗೆ ತಯಾರಿಗೆ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಳ್ಳಲು ನಿರ್ಧರಿಸಿದರು. ಆದರೆ ತಮ್ಮ ಸ್ಥಾನವನ್ನು ತೊರೆದ ನಂತರವೂ, ಅವರು ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ರೋಗಿಗಳಿಗೆ ಉಚಿತ ವೈದ್ಯಕೀಯ ಸಹಾಯ ಮಾಡುವ ಮೂಲಕ ನೆರವಾದರು.
ಆದರೆ ಇದರ ನಡುವೆ ಯುಪಿಎಸ್ಸಿ ಪರೀಕ್ಷೆ ಬರೆಯಲು ಮುಂದಾದ ರಾಜೇಶ್ ಅವರಿಗೆ ಬಹಳ ಸುಲಭವಾಗಿ ಯಶಸ್ಸನ್ನು ಕಾಣಲು ಸಾಧ್ಯವಾಗಲಿಲ್ಲ. ಅವರು ನಾಲ್ಕು ಬಾರಿ ಯುಪಿಎಸ್ಸಿ ಪರೀಕ್ಷೆಯಲ್ಲಿ ವೈಫಲ್ಯವನ್ನು ಕಾಣಬೇಕಾದ ಪರಿಸ್ಥಿತಿ ಎದುರಾಯಿತು. ಈ ಹಿನ್ನಡೆಗಳಿಂದ ವಿಚಲಿತರಾಗದ ಅವರು ಹೆಚ್ಚುವರಿ ತರಬೇತಿ ಪಡೆಯಲು ಚಂಡೀಗಢದಿಂದ ದೆಹಲಿಗೆ ಸ್ಥಳಾಂತರಗೊಂಡರು.
2020 ರಲ್ಲಿ ಯುಪಿಎಸ್ಸಿ ಪರೀಕ್ಷೆಯನ್ನು ಬರೆದ ಡಾ ರಾಜೇಶ್ ಮೋಹನ್ ಅವರು 102 ನೇ ರ್ಯಾಂಕ್ ಗಳಿಸುತ್ತಾರೆ. ಈ ಮೂಲಕ ಹಲವಾರು ಯುಪಿಎಸ್ಸಿ ಅಭ್ಯರ್ಥಿಗಳಿಗೆ ಮಾದರಿಯಾಗಿದ್ದಾರೆ.