ಚೆನ್ನೈ, ಮೇ 14 (Daijiworld News/MSP): "ಗಾಂಧೀಜಿಯನು ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆ ಕೂಡಾ ಓಬ್ಬ ಉಗ್ರ. ಹೀಗಾಗಿ ಸ್ವತಂತ್ರ ಭಾರತದ ಮೊದಲ ಉಗ್ರ ಒಬ್ಬ ಹಿಂದೂ ಆಗಿದ್ದಾನೆ " ಎಂಬ ನಟ ಕಮ್ ರಾಜಕಾರಣಿ ಕಮಲ್ ಹಾಸನ್ ಹೇಳಿಕೆಯನ್ನು ವಿರೋಧಿಸಿರುವ ಎಐಎಡಿಎಂಕೆ ಮುಖಂಡ , ಸಚಿವ ಕೆ.ಟಿ.ರಾಜೇಂದ್ರ ಬಾಲಾಜಿ ಕಮಲ್ ಹಾಸನ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಭಾರತದ ಮೊದಲ ಉಗ್ರ ಒಬ್ಬ ಹಿಂದೂ ಎಂಬ ಹೇಳಿಕೆ ನೀಡಿರುವ ಕಮಲ್ ಹಾಸನ್ ಅವರ ನಾಲಿಗೆ ಕತ್ತರಿಸಬೇಕು ಹಾಗೂ ಎಂಎನ್ ಎಂ ಪಕ್ಷವನ್ನು ನಿಷೇಧಿಸಬೇಕು. ಕೇವಲ ಮತಗಳಿಗಾಗಿ ಓಲೈಕೆ ಮಾಡಲು ಮಕ್ಕಳ ನೀದಿ ಮೈಯಂ ಪಕ್ಷದ ಅಧ್ಯಕ್ಷ ಕಮಲ್ ಹಾಸನ್ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಒಬ್ಬ ವ್ಯಕ್ತಿ ಮಾಡಿದ ಕೃತ್ಯಕ್ಕೆ ಇಡೀ ಸಮುದಾಯಕ್ಕೆ ಆರೋಪ ಹೋರಿಸುವುದು ಸರಿಯಲ್ಲ. ಕಮಲ್ ಹಾಸನ್ ವಿರುದ್ಧ ಚುನಾವಣಾ ಆಯೋಗ ಸೂಕ್ತ ಕ್ರಮ ಕೈಗೊಳ್ಳಬೇಕು ಅಂತಾ ತಮಿಳುನಾಡಿನ ಸಚಿವರೂ ಆಗಿರುವ ರಾಜೇಂದ್ರ ಬಾಲಾಜಿ ಕಿಡಿಕಾರಿದ್ದಾರೆ.
ತಮಿಳುನಾಡಿನ ಅರವಕುರಿಚಿಯಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಕಮಲ್ ಹಾಸನ್, ಸ್ವತಂತ್ರ ಭಾರತದ ಮೊದಲ ಉಗ್ರ ಒಬ್ಬ ಹಿಂದೂ ಆಗಿದ್ದ. ಆತನ ಹೆಸರು ನಾಥೂರಾಂ ಗೋಡ್ಸೆ. ಇದು ಮುಸ್ಲಿಂ ಪ್ರಾಬಲ್ಯದ ಕ್ಷೇತ್ರ ಎಂದು ಗೋಡ್ಸೆ ವಿರುದ್ದ ಈ ಮಾತು ಹೇಳಿಲ್ಲ. ಆದರೆ ನಾನು ಗಾಂಧೀಜಿ ಪ್ರತಿಮೆ ಮುಂದೆ ನಿಂತಿರುವುದರಿಂದ ಹೀಗೆ ಹೇಳ್ತಿದ್ದೀನಿ. ನಾನು ಮಹಾತ್ಮ ಗಾಂಧಿಯ ಅತ್ಯುತ್ತಮ ಮೊಮ್ಮಗ. ಹೀಗಾಗಿ ನಾನು ಗಾಂಧಿಯ ಹತ್ಯೆಗೆ ನ್ಯಾಯ ಕೇಳುತ್ತಿದ್ದೇನೆ . ಗೋಡ್ಸೆಯಿಂದಲೇ ಭಯೋತ್ಪಾದನೆಯ ಬೀಜಾಂಕುರವಾಯಿತು" ಎಂದು ಹೇಳಿದರು.