ಮುಂಬೈ, ಜೂ.22(DaijiworldNews/AK): ದೇಶದ ಅತೀ ಉದ್ದದ ಸಮುದ್ರ ಸೇತುವೆ ಅಟಲ್ ಸೇತು ಎಂದು ಕರೆಯಲಾಗುವ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ʼನಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕಳೆದ ಐದು ತಿಂಗಳ ಹಿಂದೆಯಷ್ಟೇ ಪ್ರಧಾನಿ ಮೋದಿ ಈ ಅಟಲ್ ಸೇತುಗೆ ಚಾಲನೆ ನೀಡಿದ್ದರು. ಇದೀಗ ಮಹಾರಾಷ್ಟ್ರ ಕಾಂಗ್ರೆಸ್ ಘಟಕದ ಅಧ್ಯಕ್ಷ ನಾನಾ ಪಟೋಲೆ, ರಸ್ತೆ ಮೇಲೆ ಸಂಚರಿಸಿ, ಬಿರುಕು ಬಿಟ್ಟ ಜಾಗವನ್ನು ತೋರಿಸಿ ರಸ್ತೆ ಸುರಕ್ಷತೆಯ ಬಗ್ಗೆ ಪರಿಶೀಲಿಸಿದ್ದಾರೆ. ಜೊತೆಗೆ ಅದರ ಫೋಟೋಗಳನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬಳಿಕ ಕಾಮಗಾರಿಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ.
ಇದೀಗ ಸೇತುವೆಯ ಬಳಿ ಅರ್ಧ ಕಿಮೀ ನಷ್ಟು ರಸ್ತೆ ಬಿರುಕು ಬಿಟ್ಟಿದೆ. ನಾನು ಬರೀ ಆರೋಪ ಮಾಡುವ ಬದಲು ನಿಜವಾಗಿಯೂ ಏನಾಗಿದೆ ಎಂಬುದನ್ನು ಜನರಿಗೆ ತೋರಿಸಲು ಬಂದಿದ್ದೇನೆ. ಸರ್ಕಾರವು ಜನರ ಪರವಾಗಿ ಕೆಲಸ ಮಾಡುತ್ತೇನೆ ಎಂದು ಹೇಳುತ್ತದೆ. ಆದರೆ, ಇಲ್ಲಿ ಎಷ್ಟರಮಟ್ಟಿಗೆ ಭ್ರಷ್ಟಾಚಾರ ನಡೆದಿದೆ ಎಂಬುದನ್ನು ನೋಡಿ. ಎಂದು ಪಟೋಲೆ ಆಕೋಶ್ರ ಹೊರಹಾಕಿದ್ದಾರೆ.
ಸೇತುವೆಗೆ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿಟ್ಟಿದ್ದಾರೆ. ನಮಗೆ ಅವರ ಬಗ್ಗೆ ಗೌರವ ಇದೆ. ಆದರೆ, ಅವರ ಹೆಸರಿನ ಸೇತುವೆ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ. ಮೋದಿ ಅವರು ಈ ಕುರಿತು ಗಮನಿಸಬೇಕು ಎಂದು ಆಗ್ರಹಿಸಿದ್ದಾರೆ.
ಇತ್ತ ನಾನಾ ಪಟೋಲೆ ಅವರ ಆರೋಪಕ್ಕೆ ಆಡಳಿತಾರೂಢ ಬಿಜೆಪಿ ಯೋಜನೆಯ ನೋಡಲ್ ಏಜೆನ್ಸಿಯಾಗಿರುವ ಮುಂಬೈ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸ್ಪಷ್ಟನೆ ನೀಡಿದೆ. ಬಿರುಕು ಬಿಟ್ಟಿರುವುದು ಅಟಲ್ ಸೇತುವೆಯ ಮೇಲೆ ಅಲ್ಲ, ನವಿ ಉಲ್ವೆಯಿಂದ ಬರುವ ಸರ್ವಿಸ್ ರಸ್ತೆಯಲ್ಲಿ ಎಂದು ಸ್ಪಷ್ಟಪಡಿಸಿದೆ. .
ಇನ್ನೂ ಈ ಬಗ್ಗೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಅಟಲ್ ಸೇತುಗೆ ಯಾವುದೇ ಅಪಾಯವಿಲ್ಲ. ಕಾಂಗ್ರೆಸ್ ಆರೋಪ ಸುಳ್ಳು. ಪಟೋಳೆ ಅವರು ಹಂಚಿಕೊಂಡಿರುವ ಚಿತ್ರ ಸರ್ವೀಸ್ ರಸ್ತೆಯದ್ದು ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಇದು ಸರ್ವಿಸ್ ರಸ್ತೆ, ಇದು ಮುಖ್ಯ ಸೇತುವೆಯ ಸಂಪರ್ಕ ಭಾಗವಾಗಿದೆ. ಇವುಗಳಲ್ಲಿ ಸಣ್ಣಪುಟ್ಟ ಬಿರುಕುಗಳಾಗಿದ್ದು, ಅವುಗಳನ್ನು ದುರಸ್ತಿ ಮಾಡಲಾಗುತ್ತಿದೆ. ಇದರಿಂದಾಗಿ ಯಾವುದೇ ಸಂಚಾರ ವ್ಯತ್ಯಯ ಉಂಟಾಗಿಲ್ಲ ಎಂದು ಅಟಲ್ ಸೇತು ಯೋಜನೆ ಮುಖ್ಯಸ್ಥ ಕೈಲಾಶ್ ಗಣತ್ರ ತಿಳಿಸಿದ್ದಾರೆ.