ಕಲಬುರಗಿ, ಜೂ.23(DaijiworldNews/AA): ಮಾತೆತ್ತಿದರೆ ನ್ಯಾಯದ ಬಗ್ಗೆ ಮಾತನಾಡುವ ಹಾಗೂ ಜಪ ಮಾಡುವ ಬಿಜೆಪಿಯವರು ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಪ್ರಕರಣದಲ್ಲಿ ಯಾಕೆ ಸ್ಮಶಾನ ಮೌನ ವಹಿಸಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೂರಜ್ ರೇವಣ್ಣ ಪ್ರಕರಣ ವಿಚಿತ್ರ, ವಿಕೃತ ಹಾಗೂ ಅಸಹ್ಯವಾಗಿದೆ. ಪ್ರಜ್ವಲ್ ರೇವಣ್ಣ ಅವರ ಪ್ರಕರಣ, ಮಾಜಿ ಸಿಎಂ ಬಿಎಸ್ವೈ ಫೋಕ್ಸೋ ಹಾಗೂ ಈಗಿನ ಸೂರಜ್ ಅವರ ಪ್ರಕರಣ ನೋಡಿದರೆ ಏನ್ ನಡೆಯುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ ಎಂದು ತಿಳಿಸಿದರು.
ಇಂತಹ ಕೇಸ್ನಲ್ಲಿ ಅವರು ಏನು ಮಾಡಿದ್ದಾರೆ ಎಂಬುದು ಅವರಿಗೆಯೇ ಏನು ಅನ್ನಿಸುತ್ತಿಲ್ಲವೇ? ಕೊನೆಯ ಪಕ್ಷ ಆತ್ಮಾವಲೋಕನ ಮಾಡಿಕೊಳ್ಳಲಿ. ದೊಡ್ಡಮನೆ- ದೊಡ್ಡವರು ಹಾಗೂ ಅಧಿಕಾರದಲ್ಲಿದ್ದವರು ಏನು ಸಂದೇಶ ಕೊಡುತ್ತಾರೆ. ಜವಾಬ್ದಾರಿ ಕುಟುಂಬಕ್ಕಾದ ಈ ಕಪ್ಪುಚುಕ್ಕೆ ಅಳಿಸಿ ಹಾಕುತ್ತೇವೆ. ಅಧಿಕಾರ ಬಿಟ್ಟಿರುತ್ತೇವೆ. ಮಾದರಿ ನಾಗರಿಕರಾಗುತ್ತೇವೆ ಎಂಬುದು ಅವರ ಸ್ವಂತ ವಿವೇಚನಗೆ ಹಾಗೂ ಆತ್ಮಸಾಕ್ಷಿಗೆ ಬಿಟ್ಟದ್ದು ಎಂದು ಹೇಳಿದರು.