ನವದೆಹಲಿ, 18ನೇ ಲೋಕಸಭೆಯ ಮೊದಲ ಸಂಸತ್ ವಿಶೇಷ ಅಧಿವೇಶನವು ನಾಳೆಯಿಂದ ಆರಂಭವಾಗಲಿದ್ದು, ಜುಲೈ 3ರವರೆಗೆ ಈ ಅಧಿವೇಶನ ನಡೆಯಲಿದೆ.
ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ನೂತನ ಸರ್ಕಾರ ರಚನೆಯಾದ ಬಳಿಕ ಇದು ಮೊದಲ ವಿಶೇಷ ಅಧಿವೇಶನವಾಗಿದೆ. ಈ ಅಧಿವೇಶನದಲ್ಲಿ ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಷಣ ಮಾಡಲಿದ್ದಾರೆ. ಹಾಗೂ ನರೇಂದ್ರ ಮೋದಿ ಅವರು ಸೇರಿ ಚುನಾವಣೆಯಲ್ಲಿ ಆಯ್ಕೆಯಾದ ಎಲ್ಲರೂ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಜೊತೆಗೆ ಅಧಿವೇಶನದಲ್ಲಿ ನೂತನ ಸ್ಪೀಕರ್ ಆಯ್ಕೆ ಕೂಡ ಮಾಡಲಾಗುತ್ತದೆ. ನಾಳೆ ಬೆಳಗ್ಗೆ 11 ಗಂಟೆಗೆ ನರೇಂದ್ರ ಮೋದಿ ಹಾಗೂ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದರೊಂದಿಗೆ ದೇಶದ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸಂಸದರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಮೂಲಕ ನಾಳೆ ಮೋದಿ, ಸಚಿವರು ಸೇರಿ ಒಟ್ಟು 280 ಸದಸ್ಯರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಜೂನ್ 25 ರಂದು 264 ಸದಸ್ಯರು ಪದಗ್ರಹಣ ಮಾಡಲಿದ್ದಾರೆ.