ನವದೆಹಲಿ,ಮೇ 14 (Daijiworld News/MSP): ಬಯಲುಸೀಮೆಯ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಸರಕಾರ ಜಾರಿಗೊಳಿಸಲು ಮುಂದಾಗಿರುವ ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ಸಲ್ಲಿಸಲಾಗಿದ್ದ ಮರು ವಿಚಾರಣೆಯನ್ನು ಸೋಮವಾರ ಪೂರ್ಣಗೊಳಿಸಿರುವ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಈ ಕುರಿತ ತೀರ್ಪನ್ನು ಕಾದಿರಿಸಿದೆ.
ಪ್ರಕರಣಕ್ಕೆ ಸಂಬಂದಪಟ್ಟಂತೆ ಈಗಾಗಲೇ ವಿಸ್ತೃತ ರೂಪದ ವಾದ, ವಿವಾದಗಳನ್ನು ಈಗಾಗಲೇ ಆಲಿಸಿರುವುದರಿಂದ ಹೆಚ್ಚುವರಿ ವಾದವನ್ನು ಒಂದು ವಾರದೊಳಗೆ ಲಿಖಿತ ರೂಪದಲ್ಲಿ ಸಲ್ಲಿಸುವಂತೆ ಅರ್ಜಿದಾರರು ಹಾಗೂ ರಾಜ್ಯ ಸರ್ಕಾರಗಳ ಪರ ವಕೀಲರಿಗೆ ನ್ಯಾಯಮೂರ್ತಿ ಆದರ್ಶಕುಮಾರ್ ಗೋಯೆಲ್ ನೇತೃತ್ವದ ಎನ್ಜಿಟಿಯ ಪ್ರಧಾನ ಪೀಠ ಸೂಚನೆ ನೀಡಿದೆ.
ಸಾಮಾಜಿಕ ಕಾರ್ಯಕರ್ತ ಕೆ.ಎನ್.ಸೋಮಶೇಖರ್ ಎತ್ತಿನಹೊಳೆ ಕಾಮಗಾರಿಗೆ ಸಂಬಂಧಿಸಿ ಮರಗಳ ಹನನ ಅವಕಾಶ ನೀಡಿರುವುದನ್ನು ಎನ್ಜಿಟಿ ಮುಂದೆ ಪ್ರಶ್ನಿಸಿದ್ದರು. ಪರಿಸರಕ್ಕೆ ಸಂಬಂಧಿಸಿದ ಕಾನೂನುಗಳನ್ನು ಯೋಜನೆಗಾಗಿ ಗಾಳಿಗೆ ತೂರಲಾಗಿದೆ. ಪರಿಸರ ಮತ್ತು ಅರಣ್ಯ ಅನುಮತಿಯೇ ಕಾನೂನುಬಾಹಿರವಾಗಿದ್ದು, ಯೋಜನೆಗೆ ಸಮ್ಮತಿ ಸೂಚಿಸಬಾರದು ಎಂದು ಅರ್ಜಿದಾರ ಪರ ವಕೀಲರು ಕೋರಿದರು.
ಬರಪೀಡಿತ ಜಿಲ್ಲೆಗಳ ಕುಡಿಯುವ ನೀರನ್ನು ಪೂರೈಸುವ ಉದ್ದೇಶದಿಂದ ಈ ಮಹತ್ವದ ಯೋಜನೆ ಕೈಗೊಳ್ಳಲಾಗಿದ್ದು, ಅರ್ಜಿಯ ಸಿಂಧುತ್ವವೇ ಪ್ರಶ್ನಾರ್ಹವಾಗಿದೆ ಎಂದು ಸರಕಾರದ ಪರ ವಕೀಲರು ನ್ಯಾಯಪೀಠದ ಮುಂದೆ ಪ್ರತಿಪಾದಿಸಿದರು. ಈ ಹಿನ್ನಲೆಯಲ್ಲಿ ಹೆಚ್ಚುವರಿ ವಾದವಿದ್ದರೆ ಸಲ್ಲಿಸುವಂತೆ ತಿಳಿಸಿ ನ್ಯಾಯಾಧೀಶರು ತೀರ್ಪನ್ನು ಕಾದಿರಿಸಿದೆ.