ಚಂಡೀಗಢ, ಜೂ.24(DaijiworldNews/AK): ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್ಸಿ ಯನ್ನು ಬರೆಯಲು ಸಾವಿರಾರು ಅಭ್ಯರ್ಥಿಗಳು ಪ್ರತಿವರ್ಷ ತರಬೇತಿ ಪಡೆಯುತ್ತಾರೆ. ಅವರಲ್ಲಿ ಕೆಲವರು ಮಾತ್ರ ಉತ್ತೀರ್ಣರಾಗುವಲ್ಲಿ ಯಶಸ್ವಿಯಾಗುತ್ತಾರೆ. ಆದರೆ ಕೆಲವರು ತರಬೇತಿ ಪಡೆಯದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ. ಹೀಗೆ ತರಬೇತಿ ಪಡೆಯದೇ ಉತ್ತೀರ್ಣರಾದವರಲ್ಲಿ ಚಂದ್ರಜ್ಯೋತಿ ಸಿಂಗ್ ಕೂಡ ಒಬ್ಬರು.
ಚಂದ್ರಜ್ಯೋತಿ ಅವರು ಮಾಜಿ ಸೇನಾ ಅಧಿಕಾರಿಗಳ ಕುಟುಂಬದಲ್ಲಿ ಜನಿಸಿವರು. ಚಂದ್ರಜ್ಯೋತಿ ಅವರ ತಂದೆ ಕರ್ನಲ್ ದಲ್ಬಾರಾ ಸಿಂಗ್ ಸೈನ್ಯದ ವಿಕಿರಣ ಶಾಸ್ತ್ರಜ್ಞರಾಗಿದ್ದರು ಹಾಗೂ ತಾಯಿ ತಾಯಿ ಕರ್ನಲ್ ಮೀನಾ ಸಿಂಗ್ ಲೆಫ್ಟಿನೆಂಟ್ ಆಗಿದ್ದರು. ಅವರ ಈ ಕುಟುಂಬದ ಹಿನ್ನೆಲೆಯೇ ಚಂದ್ರಜ್ಯೋತಿ ಅವರು ಜೀವನದಲ್ಲಿ ಯಶಸ್ವಿಯಾಗಲು ಯಾವಾಗಲೂ ಸ್ಫೂರ್ತಿ ನೀಡಿತು.
ಚಂದ್ರಜ್ಯೋತಿ ಅವರು ಚಂಡೀಗಢದ ಭವನ ವಿದ್ಯಾಲಯದಿಂದ 12ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ 95.4% ಅಂಕಗಳನ್ನು ಮತ್ತು ಜಲಂಧರ್ನ ಅಪೀಜಯ್ ಶಾಲೆಯಿಂದ 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ 10 ಸಿಜಿಪಿಎ ಅಂಕಗಳನ್ನು ಪಡೆದಿದ್ದರು. ತಮ್ಮ ಅಧ್ಯಯನವನ್ನು ಮುಂದುವರೆಸಿದ ಅವರು, 2018ರಲ್ಲಿ ದೆಹಲಿ ವಿಶ್ವವಿದ್ಯಾಲಯದ ಸೇಂಟ್ ಸ್ಟೀಫನ್ಸ್ ಕಾಲೇಜಿನಿಂದ 7.75ರ ಸಿಜಿಪಿಎ ಮತ್ತು ಇತಿಹಾಸದಲ್ಲಿ ಹಾನರ್ ಪದವಿ ಗಳಿಸಿದರು.
ಪದವಿ ಹಂತದ ಅಧ್ಯಯನದ ಬಳಿಕ 2018ರಲ್ಲಿ ತನ್ನ ಯುಪಿಎಸ್ಸಿ ತಯಾರಿ ಪ್ರಾರಂಭಿಸುವ ಮೊದಲು ಚಂದ್ರಜ್ಯೋತಿ ಒಂದು ವರ್ಷ ರಜೆ ತೆಗೆದುಕೊಂಡಿದ್ದರು. ಸ್ವ ಅಧ್ಯಯನದ ಮೂಲಕ ಅವರು ಯುಪಿಎಸ್ಸಿ ಪರೀಕ್ಷೆಯನ್ನು ಬರೆದು 28ನೇ ರ್ಯಾಂಕ್ ಗಳಿಸಿದರು. ಈ ಮೂಲಕ ಚಂದ್ರಜ್ಯೋತಿ ಅವರು 22ನೇ ವಯಸ್ಸಿಗೆ ಐಎಎಸ್ ಅಧಿಕಾರಿಯಾಗುವಲ್ಲಿ ಯಶಸ್ವಿಯಾಗುತ್ತಾರೆ. ಈ ಮೂಲಕ ಹಲವಾರು ಯುಪಿಎಸ್ಸಿ ಅಭ್ಯರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ.