ಆಗುಂಬೆ, ಮೇ 14 (Daijiworld News/MSP): ವಾಹನ ಸಂಚಾರ ನಿಷೇಧಗೊಂಡಿರುವ 3 ಜಿಲ್ಲೆಗಳನ್ನು ಅತೀ ಹತ್ತಿರದಿಂದ ಸಂಪರ್ಕಿಸುವ ಆಗುಂಬೆ ಘಾಟಿ ರಸ್ತೆ ಮಾರ್ಗದ ದುರಸ್ತಿ ಕಾಮಗಾರಿ ಬಹುತೇಕ ಪೂರ್ಣಗೊಂಡಿರುವ ಹಿನ್ನಲೆಯಲ್ಲಿ ಮೇ 16 ರಿಂದ ಲಘು ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಉಡುಪಿ-ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ 169ಎ ರಸ್ತೆಯ ಆಗುಂಬೆ ಘಾಟಿ 14 ಮತ್ತು 7ನೇ ತಿರುವುಗಳಲ್ಲಿ ಕಳೆದ ಮಳೆಗಾಲದಲ್ಲಿ ಭೂಕುಸಿತ ಸಂಭವಿಸಿ ಸಂಚಾರ ದುಸ್ತರವಾಗಿತ್ತು. ಹೀಗಾಗಿ ಎಪ್ರಿಲ್ 1ರಿಂದ ಆಗುಂಬೆ ಘಾಟಿ ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಿ ದುರಸ್ತಿ ಕೆಲಸ ನಡೆಸಲಾಗಿತ್ತು. ಇದೀಗ 2 ಕೋಟಿ ವೆಚ್ಚದಲ್ಲಿ ಕಾಮಗಾರಿ ಸಂಪೂರ್ಣಗೊಂಡ ಹಿನ್ನಲೆಯಲ್ಲಿ ಮೇ 15 ರ ಮಧ್ಯರಾತ್ರಿಯಿಂದ ಲಘು ವಾಹನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಸಧ್ಯಕ್ಕೆ ಬಸ್, ಆ್ಯಂಬುಲೆನ್ಸ್, ಕಾರು, ದ್ವಿಚಕ್ರ ವಾಹನಗಳಿಗೆ ಮಾತ್ರ ಮೇ 15ರ ಮಧ್ಯರಾತ್ರಿಯಿಂದ ಸಂಚಾರಕ್ಕೆ ಪ್ರವೇಶ ಅವಕಾಶ ಕಲ್ಪಿಸಲಾಗಿದೆ. ಸರಕು ಸಾಗಾಟ ಮಾಡುವ ಘನ ವಾಹನಗಳಿಗೆ ಜೂನ್ 1ರಿಂದ ಸಂಚಾರ ಅವಕಾಶ ಕಲ್ಪಿಸಲಾಗಿದೆ.
ಆಗುಂಬೆ ಘಾಟಿಯ ಹೇರ್ಪಿನ್ 7ನೇ ತಿರುವು ಕಳೆದ ವರ್ಷ ಸುರಿದ ಮಳೆಯಲ್ಲಿ ಅತೀ ಹೆಚ್ಚು ಭೂಕುಸಿತಗೊಂಡ ಪ್ರದೇಶ. ಈ ಭಾಗದಲ್ಲಿ ಸಂಚಾರ ಅಪಾಯ ಎಂಬ ಕಾರಣಕ್ಕೆ ಆಗುಂಬೆ ಘಾಟಿ ಸಂಚಾರ ಬಂದ್ ಮಾಡಲಾಗಿತ್ತು. ಇಲ್ಲಿ ಈಗ ಕೇವಲ ತಾತ್ಕಾಲಿಕ ಮರಳು ಚೀಲಗಳನ್ನು ಅಳವಡಿಸಿರುವುದಷ್ಟೇ ಅಲ್ಲದೆ ಯಾವುದೇ ದುರಸ್ಥಿ ಕಾರ್ಯ ಕೈಗೊಂಡಿಲ್ಲ. ಮುಂದಿನ ಮಳೆಗಾಲದಲ್ಲಿ ಮತ್ತೆ ವಿಪರೀತ ಮಳೆ ಸುರಿದರೇ ಘಾಟಿ ಕುಸಿತಗೊಂಡು ಮತ್ತೆ ಸಂಚಾರ ಬಂದ್ ಆಗುವ ಭೀತಿ ಇದೆ. ಸಮಯದ ಅಭಾವದಿಂದ ಈ ತಿರುವಿನಲ್ಲಿ ದುರಸ್ತಿ ಕೆಲಸ ಕೈಗೊಂಡಿಲ್ಲ . ಮಾತ್ರವಲ್ಲದೆ ಈ ಮಳೆಗಾಲದಲ್ಲಿ ಸಮಸ್ಯೆಯಾಗದು ಎಂಬ ಭರವಸೆಯನ್ನು ರಾಷ್ಟ್ರೀಯ ಹೆದ್ದಾರಿ ವಿಭಾಗ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ 7ನೇ ತಿರುವಿನಲ್ಲಿ ಯಾವುದೇ ಕಾಮಗಾರಿ ನಡೆಸದೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಮುಂದೆ ಅನಾಹುತಗಳ ಸಂಭವಿಸಿದ್ರೆ ಯಾರು ಹೊಣೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.