ಬೀದರ್, ಜೂ.24(DaijiworldNews/AA): ನಮ್ಮ ಅಭಿಪ್ರಾಯ ನಾವು ಹೇಳಿದ್ದೇವೆ. ಅಂತಿಮವಾಗಿ ಡಿಸಿಎಂ ಮಾಡೋದು ಹೈಕಮಾಂಡ್ಗೆ ಬಿಟ್ಟ ವಿಚಾರ ಎಂದು ಡಿಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿ, ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಬೀದರ್ನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ನಮ್ಮ ಪಕ್ಷ ಹೈಕಮಾಂಡ್ ಪಕ್ಷವಾಗಿದ್ದು ಈಗಾಗಲೇ ನಾನು ಮತ್ತು ರಹೀಂಖಾನ್ ನಮ್ಮ ಅಭಿಪ್ರಾಯ ಹೇಳಿದ್ದೇವೆ. ಇನ್ನೂ ಡಾ.ಜಿ ಪರಮೇಶ್ವರ್, ರಾಜಣ್ಣ, ಸತೀಶ್ ಜಾರಕಿಹೊಳಿ ಹಾಗೂ ಎಂ.ಬಿ ಪಾಟೀಲ್ ಕೂಡ ಅವರ ಅಭಿಪ್ರಾಯಗಳನ್ನು ಹೇಳಿದ್ದು, ಅಂತಿಮವಾಗಿ ಡಿಸಿಎಂ ಮಾಡೋದು ಹೈಕಮಾಂಡ್ಗೆ ಬಿಟ್ಟ ವಿಚಾರ ಎಂದ ಅವರು ಪರೋಕ್ಷವಾಗಿ ಡಿಸಿಎಂ ಸ್ಥಾನದ ಇಂಗಿತ ವ್ಯಕ್ತಪಡಿಸಿದ್ದಾರೆ.
ಈ ದೇಶಕ್ಕೆ ಸ್ವಾತಂತ್ರ್ಯ ತಂದಿದ್ದು ನಾವು. ಸ್ವಾತಂತ್ರ್ಯ ತರಲು ಬಿಜೆಪಿ ಏನು ಮಾಡಿದೆ? ಬಿಜೆಪಿ ಹಾಗೂ ಆರ್ಎಸ್ಎಸ್ ಯಾರ ಜೊತೆ ಇದ್ದರೂ ಇತಿಹಾಸಕ್ಕೆ ಗೊತ್ತಿದೆ. ಈ ದೇಶ ನಮ್ಮದು ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ನಟ ದರ್ಶನ್ಗೆ ಶಿಕ್ಷೆಯಾಗಿದೆ. ಈಗ ಅವರು ಜೈಲಿನಲ್ಲಿ ಇದ್ದಾರೆ. ಹೀಗಾಗಿ ಈ ಬಗ್ಗೆ ನಾನು ಹೆಚ್ಚು ಕಾಮೆಂಟ್ ಮಾಡುವುದಿಲ್ಲ ಎಂದರು.