ಬೆಂಗಳೂರು, ಜೂ.24(DaijiworldNews/AA): ರಾಜ್ಯಾದ್ಯಂತ ಕಬಾಬ್, ಫಿಶ್, ಚಿಕನ್ ಖಾದ್ಯಗಳಲ್ಲಿ ಕೃತಕ ಬಣ್ಣ ಬಳಕೆಗಳನ್ನು ನಿಷೇಧಿಸಿ ಕರ್ನಾಟಕ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ರಾಜ್ಯದ 36 ಕಡೆ ಕಬಾಬ್ ಮಾದರಿ ಸಂಗ್ರಹಿಸಿ ಲ್ಯಾಬ್ಗೆ ಕಳಿಸಲಾಗಿತ್ತು. ಇದನ್ನು ಪರೀಕ್ಷಿಸಿದಾಗ ಅದರಲ್ಲಿ ಯಲ್ಲೋ ಹಾಗೂ ಕಾರ್ಮೋಸಿನ್ ಮಾದರಿ ಕಂಡುಬಂದಿದೆ. ಹೀಗಾಗಿ ಆಹಾರದಲ್ಲಿ ಕೃತಕ ಬಣ್ಣ ಬಳಸುವುದರಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಆಯುಕ್ತ ಈ ನಿರ್ಧಾರ ತೆಗೆದುಕೊಂಡಿದೆ.
ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಈ ಹಿಂದೆ ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿತ್ತು. ಬಳಸುವ ಕೃತಕ ಬಣ್ಣಗಳಲ್ಲಿ ಹಾನಿಕಾರಕ ರಾಸಾಯನಿಕ ಇರುವುದು ಪತ್ತೆಯಾಗಿತ್ತು. ಹೀಗಾಗಿ ಕಾಟನ್ ಕ್ಯಾಂಡಿ, ಗೋಬಿಗೆ ಕೃತಕ ಬಣ್ಣ ಬಳಕೆ ನಿರ್ಬಂಧಿಸಲಾಗಿತ್ತು. ಇದೀಗ ಕಬಾಬ್, ಫಿಶ್, ಚಿಕನ್ಗೆ ಕೃತಕ ಬಣ್ಣ ಬಳಕೆ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ.