ಬೆಂಗಳೂರು,ಜೂ.24(DaijiworldNews/AA): ಮೇ 15 ರಂದು ಬೆಂಗಳೂರು ದಕ್ಷಿಣ ಡಿಸಿಪಿ ವ್ಯಾಪ್ತಿಯ ಸುಬ್ರಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ದ್ವಿತೀಯ ಬಿಬಿಎ ವಿದ್ಯಾರ್ಥಿನಿ ಪ್ರಭುದ್ದ ಸಾವಿನ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ.
ಸಾಮಾಜಿಕ ಕಾರ್ಯಕರ್ತೆ ಆಗಿರುವ ಕೆ.ಆರ್.ಸೌಮ್ಯ ಅವರು ತಮ್ಮ ಪುತ್ರಿ ಸಾವಿನ ಪ್ರಕರಣದ ತನಿಖೆಗೆ ಒಪ್ಪಿಸಲು ಸಾಮಾಜಿಕ ಕಾರ್ಯಕರ್ತರ ನಿಯೋಗದೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಮಾಡಿದರು.
ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರು ಮನವಿ ಪುರಸ್ಕರಿಸಿ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲು ಸೂಚಿಸಿದ್ದಾರೆ.
ಮಗಳ ಭೀಕರ ಹತ್ಯೆಯ ತನಿಖೆಯಲ್ಲಿ ಸ್ಥಳೀಯ ಪೋಲಿಸರ ಅಸಹಕಾರ, ಉದ್ದೇಶಪೂರ್ವಕ ನಿರ್ಲಕ್ಷ್ಯತೆ, ಸಾಕ್ಷ್ಯ ನಾಶ ಯತ್ನ, ಕೊಲೆಗಡುಕರೊಂದಿಗಿನ ಶಾಮೀಲುದಾರಿಕೆ, ಸಂತ್ರಸ್ತ ತಾಯಿಯಾದ ನನಗೆ ಬೆದರಿಕೆ ವಿಚಾರಗಳ ಬಗ್ಗೆ ಸಮಗ್ರ ತನಿಖೆ, ನ್ಯಾಯ ಮತ್ತು ರಕ್ಷಣೆಗಾಗಿ ಸಿಐಡಿಗೆ ವಹಿಸಬೇಕು ಎಂದು ವಿದ್ಯಾರ್ಥಿನಿ ತಾಯಿ ಸಾಮಾಜಿಕ ಕಾರ್ಯಕರ್ತೆ ಕೆ.ಆರ್.ಸೌಮ್ಯ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.