ನವದೆಹಲಿ, ಜೂ 26 (DaijiworldNews/ AK): ಸ್ವಾತಂತ್ರ್ಯ ಸಿಕ್ಕ ನಂತರ ಮೊದಲ ಬಾರಿಗೆ ಲೋಕಸಭಾ ಸ್ಪೀಕರ್ ಹುದ್ದೆಗೆ ಇಂದು ಚುನಾವಣೆ ನಡೆದಿದೆ. ಇಂದು ಇಂಡಿಯಾ ಅಭ್ಯರ್ಥಿ ಕೆ. ಸುರೇಶ್ ಅವರನ್ನು ಹಿಂದಿಕ್ಕಿ ಎನ್ಡಿಎ ಅಭ್ಯರ್ಥಿ ಓಂ ಬಿರ್ಲಾ 2ನೇ ಬಾರಿಗೆ ಲೋಕಸಭೆ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ.
ಅವರು ಸದನದಲ್ಲಿ ಇಂದು ತುರ್ತು ಪರಿಸ್ಥಿತಿಯನ್ನು ಖಂಡಿಸಿ ಮಾಡಿದ ಭಾಷಣಕ್ಕೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿ, ಘೋಷಣೆಗಳನ್ನು ಕೂಗಿದ್ದಾರೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಸ್ಪೀಕರ್ ಓಂ ಬಿರ್ಲಾ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
1975ರಲ್ಲಿ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ನೇತೃತ್ವದ ಸರ್ಕಾರ ಹೇರಿದ್ದ ತುರ್ತು ಪರಿಸ್ಥಿತಿಯನ್ನು ಖಂಡಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ ಇಂದು ಧನ್ಯವಾದ ಹೇಳಿದ್ದಾರೆ.
ಅಲ್ಲದೇ ಈ ಕುರಿತು ಗೌರವಾನ್ವಿತ ಸ್ಪೀಕರ್ ಅವರು ತುರ್ತು ಪರಿಸ್ಥಿತಿಯನ್ನು ಬಲವಾಗಿ ಖಂಡಿಸಿದ್ದಾರೆ. ಆ ಸಮಯದಲ್ಲಿ ಮಾಡಿದ ಅತಿರೇಕಗಳನ್ನು ಎತ್ತಿ ತೋರಿಸಿದ್ದಾರೆ ಮತ್ತು ಪ್ರಜಾಪ್ರಭುತ್ವವನ್ನು ಕತ್ತು ಹಿಸುಕಿದ ವಿಧಾನವನ್ನು ಉಲ್ಲೇಖಿಸಿದ್ದಾರೆ. ಇದು ನನಗೆ ಸಂತೋಷ ತಂದಿದೆ ಎಂದು ಹೇಳಿದ್ದಾರೆ.