ಬೆಂಗಳೂರು, ಜೂ 27 (DaijiworldNews/ AK): ಹೆಚ್ಚುವರಿ ಡಿಸಿಎಂ ಬಗ್ಗೆ ಹೇಳಿಕೆ ನೀಡುವವರು ಇಲ್ಲಿ ಸಮಯ ವ್ಯರ್ಥ ಮಾಡುವುದಕ್ಕಿಂತ ಹೈಕಮಾಂಡ್ ಬಳಿ ಹೋಗಿ ಮಾತನಾಡಲಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು.
ವಿಧಾನಸೌಧ ಆವರಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್ಚುವರಿ ಡಿಸಿಎಂ ವಿಚಾರವಾಗಿ ಮಾಧ್ಯಮಗಳ ಮುಂದೆಮಾತನಾಡುತ್ತಿರುವವರು, ಹೈಕಮಾಂಡ್ ನಾಯಕರ ಬಳಿ ಹೋಗಿ ಮಾತನಾಡಲಿ. ಮಾಧ್ಯಮಗಳು ಪ್ರಚಾರ ಮಾಡುತ್ತವೆಯೇ ಹೊರತು, ಪರಿಹಾರ ನೀಡುವುದಿಲ್ಲ. ಈ ವಿಚಾರವಾಗಿ ಮಾಧ್ಯಮಗಳ ಮುಂದೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ ಎಂದರು.
ಯಾರು ಬೇಕಾದರೂ ಹೈಕಮಾಂಡ್ ನಾಯಕರ ಬಳಿ ಹೋಗಿ ಪರಿಹಾರ ಹುಡುಕಿಕೊಂಡು ಬರಲಿ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.