ನವದೆಹಲಿ, ಜೂ.28(DaijiworldNews/AA): ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್-1ರ ಮೇಲ್ಚಾವಣಿಯ ಒಂದು ಭಾಗ ಕುಸಿದು ಬಿದ್ದ ಪರಿಣಾಮ ಟ್ಯಾಕ್ಸಿ ಹಾಗೂ ಕಾರುಗಳು ಜಖಂಗೊಂಡ ಘಟನೆ ಇಂದು ಮುಂಜಾನೆ ಸಂಭವಿಸಿದೆ. ಈ ಘಟನೆಯಲ್ಲಿ 7 ಮಂದಿ ಸಾವನ್ನಪ್ಪಿದ್ದು, ಈ ಪೈಕಿ ಓರ್ವ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಜಖಂಗೊಂಡಿರುವ ವಾಹನಗಳಲ್ಲಿ ಜನ ಸಿಲುಕಿಕೊಂಡಿರುವ ಶಂಕೆ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಟರ್ಮಿನಲ್ನ ಪಿಕ್-ಅಪ್ ಮತ್ತು ಡ್ರಾಪ್ ಪ್ರದೇಶದಲ್ಲಿ ನಿಲ್ಲಿಸಿದ ಕಾರುಗಳಿಗೆ ಹಾನಿಯಾಗಿದೆ. ಘಟನೆ ನಡೆದ ಕೂಡಲೇ ಮೂರು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕಳುಹಿಸಲಾಯಿತು. ಗಾಯಾಳುಗಳನ್ನು ರಕ್ಷಿಸಿ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ದೆಹಲಿ ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಕಿಂಜರಾಪು ಅವರು, ಸದ್ಯ ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳದಲ್ಲಿದ್ದು, ಘಟನೆಯ ಬಗ್ಗೆ ನಿಗಾವಹಿಸಿದ್ದಾರೆ. ಘಟನೆಯ ಕುರಿತು ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸಂಕಷ್ಟದಲ್ಲಿ ಸಿಲುಕಿರುವ ಪ್ರಯಾಣಿಕರಿಗೆ ಸಹಾಯ ಮಾಡಲು ವಿಮಾನಯಾನ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ ಎಂದು ಹೇಳಿದ್ದಾರೆ.
ಮೇಲ್ಚಾವಣಿ ಕುಸಿತದಿಂದ ಟ್ಯಾಕ್ಸಿ ಸೇರಿದಂತೆ ಹಲವು ವಾಹನಗಳು ಜಖಂಗೊಂಡಿದೆ. ಘಟನೆಯ ಪರಿಣಾಮ ಟರ್ಮಿನಲ್ 1 ರಿಂದ ಎಲ್ಲಾ ನಿರ್ಗಮನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಸುರಕ್ಷತಾ ಕ್ರಮವಾಗಿ ಚೆಕ್-ಇನ್ ಕೌಂಟರ್ಗಳನ್ನು ಮುಚ್ಚಲಾಗಿದೆ.