ಕೋಲ್ಕತ್ತಾ, ಮೇ 14 (Daijiworld News/SM): ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ರೋಡ್ ಶೋ ವೇಳೆ ಭಾರಿ ಹಿಂಸಾಚಾರ ನಡೆದ ಬಗ್ಗೆ ವರದಿಯಾಗಿದೆ.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ರೋಡ್ ಶೋ ವೇಳೆ ಬಿಜೆಪಿ ಕಾರ್ಯಕರ್ತರು ಹಾಗೂ ಕೋಲ್ಕತ್ತಾ ವಿವಿ ವಿದ್ಯಾರ್ಥಿಗಳ ನಡುವೆ ಘರ್ಷಣೆ ಉಂಟಾಗಿದ್ದು, ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಕೋಲ್ಕತ್ತಾ ಅಮಿತ್ ಶಾ ರೋಡ್ ಶೋ ವಿರೋಧಿಸಿ ವಿವಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದ ವೇಳೆ, ಬಿಜೆಪಿ ಕಾರ್ಯಕರ್ತರೊಂದಿಗೆ ಜಗಳವಾಗಿದೆ. ಘಟನೆಯಲ್ಲಿ ಯಾವುದೇ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ.
ಮಾತಿಗೆ ಮಾತು ಬೆಳೆದು, ಗಲಭೆ ತಾರರಕ್ಕೇರಿದೆ. ವಿವಿ ಗೇಟ್ಗೆ ಬಿಜೆಪಿಗರು ಬಾಟಲ್ ಹಾಗೂ ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ. ಮತ್ತೊಂದು ಗುಂಪು ಅಮಿತ್ ಶಾರಿದ್ದ ಟ್ರಕ್ಗೂ ಕಲ್ಲು ತೂರಾಟ ನಡೆಸಿದೆ ಎಂದು ತಿಳಿದುಬಂದಿದೆ.
ಇನ್ನು ವಿವಿ ಗೇಟ್ ಮುಂಭಾಗ ಶಾ ಮೆರವಣಿಗೆ ಮಾಡುತ್ತಿದ್ದ ವೇಳೆ ವಿವಿ ವಿದ್ಯಾರ್ಥಿಗಳು ಕಪ್ಪು ಬಾವುಟ ಪ್ರದರ್ಶಿಸಿ, ಅಮಿತ್ ಶಾ ಗೋ ಬ್ಯಾಕ್ ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಇದೇ ಕಾರಣಕ್ಕೆ ಬಿಜೆಪಿಗರು ಅವರ ಮೇಲೆ ಮುಗಿಬಿದ್ದಿದ್ದಾರೆ. ಮೋಟಾರ್ ಸೈಕಲ್ ಗೆ ಬೆಂಕಿ ಹೊತ್ತಿಸಿ, ಕಲ್ಲು ತೂರಾಟ ನಡೆಸಿ, ಸಮಾಜ ಸುಧಾರಕರಾದ ಈಶ್ವರಚಂದ್ರ ವಿದ್ಯಾಸಾಗರ ಅವರ ಪುತ್ಥಳಿಗೆ ಕಿಡಿಗೇಡಿಗಳು ಹಾನಿಯನ್ನುಂಟು ಮಾಡಿದ್ದಾರೆ.
ಇನ್ನು ಘಟನೆಯ ಬಳಿಕ ರೋಡ್ ಶೋ ನಡೆಸುವುದಕ್ಕೆ ಪೊಲೀಸರು ಏಕೆ ಅನುಮತಿ ನೀಡಿದರು? ಎಂದು ಮಮತಾ ಬ್ಯಾನರ್ಜಿ ಪ್ರಶ್ನೆ ಮಾಡಿದ್ದಾರೆ. ಹಿಂಸಾಚಾರದ ಘಟನೆ ವರದಿಯಾದ ಕೆಲವೇ ನಿಮಿಷದಲ್ಲಿ ಈ ಪ್ರತಿಕ್ರಿಯೆ ನೀಡಿದ್ದಾರೆ. ದಕ್ಷಿಣ ಕೋಲ್ಕತ್ತಾದ ಬೆಹಲ ಪ್ರದೇಶದಲ್ಲಿ ಚುನಾವಣೆ ಪ್ರಚಾರ ನಡೆಸುವ ವೇಳೆ ಮಮತಾ ಬ್ಯಾನರ್ಜಿ ಪ್ರತಿಕ್ರಿಯೆ ನೀಡಿದ್ದಾರೆ. ಒಂದು ವೇಳೆ ಬಂಗಾಲದ ಸಂಸ್ಕೃತಿಗೆ ಹಾನಿ ಮಾಡುವಂತೆ ಬಿಜೆಪಿಯವರು ನಡೆದುಕೊಂಡರೆ ನನಗಿಂತ ಅಪಾಯಕಾರಿ ಯಾರೂ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.