ನವದೆಹಲಿ, ಜೂ 29 (DaijiworldNews/ AK):ದೇವದಾರಿ ಗಣಿ ಯೋಜನೆ ಬಗ್ಗೆ ಜನರಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕೆಟ್ಟ ಅಭಿಪ್ರಾಯ ಉಂಟು ಮಾಡಲು ಸಂಚು ಮಾಡಲಾಗುತ್ತಿದೆ ಎಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಕಟುವಾಗಿ ಟೀಕಿಸಿದರು.
ನವದೆಹಲಿಯಲ್ಲಿ ರಾಜ್ಯದ ಸಂಸದರ ಸಭೆಯ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಕೇಂದ್ರ ಸಚಿವರು, ರಾಜ್ಯಕ್ಕೆ 2,800 ಕೋಟಿ ರೂ.ಗೂ ಹೆಚ್ಚು ಆದಾಯ ತಂದುಕೊಡುವ ಹಾಗೂ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಮಾಡುವ ಈ ಯೋಜನೆ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ಮಾಹಿತಿ ಹರಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ದೇವದಾರಿ ಗಣಿಗಾರಿಕೆಗೆ ನಾನು ಹೊಸದಾಗಿ ಒಪ್ಪಿಗೆ ನೀಡಿಲ್ಲ. ರಾಜ್ಯ ಸರ್ಕಾರವೇ ಇದಕ್ಕೆ ಅನುಮತಿ ಕೊಟ್ಟಿದೆ. ಹಣಕಾಸು ನೆರವು ಪಡೆಯುವ ವಿಚಾರದಲ್ಲಿ ಯೋಜನೆಯ ಕಡತವನ್ನು ಆರ್ಥಿಕ ಇಲಾಖೆಗೆ ಕಳಿಸಬೇಕಿತ್ತು. ಅದನ್ನು ನಾನು ಮಾಡಿದ್ದೇನೆ. ಕುದುರೆಮುಖ ಪ್ರದೇಶದಲ್ಲಿ ಕೆಐಒಸಿಎಲ್ (KIOCL) ನಿಯಮಗಳನ್ನು ಉಲ್ಲಂಘನೆ ಮಾಡಿದ್ದರೆ ಕ್ರಮ ಜರುಗಿಸಬಹುದು ಹಾಗೂ ದಂಡವನ್ನು ಹಾಕಬಹುದು. ಅದನ್ನು ಬಿಟ್ಟು ಸರಕಾರಿ ಸ್ವಾಮ್ಯದ ಕಂಪನಿಯೊಂದರ ಯೋಜನೆಗೆ ಅಡ್ಡಗಾಲು ಹಾಕಿದರೆ ಅದು ಮತ್ತಷ್ಟು ನಷ್ಟಕ್ಕೆ ತುತ್ತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.