ಕುಂದಗೋಳ, ಮೇ14(Daijiworld News/SS): ಲಜ್ಜೆಗೆಟ್ಟ, ಮಾನಗೆಟ್ಟ ಬಿಜೆಪಿಯವರು 23ರ ಬಳಿಕ ನಮ್ಮ ಸರ್ಕಾರ ಬರುತ್ತದೆ ಎಂದು ಹೇಳುತ್ತಲೇ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ.
ಉಪಚುನಾವಣೆಯ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮೂರು ದಿನ ಸಿ.ಎಂ ಆಗಿ ಬಹುಮತ ಸಾಬೀತು ಪಡಿಸಲಾಗದ ಯಡಿಯೂರಪ್ಪಗೆ ಅಧಿಕಾರ ಕಳೆದುಕೊಂಡಾಗಿನಿಂದಲೂ ವಿಧಾನಸೌಧದ ಮೂರನೇ ಮಹಡಿಯ ಕನಸೇ ಬೀಳುತ್ತಿದೆ. ತಿಪ್ಪರಲಾಗ ಹಾಕಿದರೂ ಅವರು ಮತ್ತೆ ಸಿ.ಎಂ ಆಗುವುದಿಲ್ಲ ಎಂದರು.
ಮೇ 23ರ ಬಳಿಕ ರಾಜ್ಯ ಸರ್ಕಾರ ಬೀಳಲಿದ್ದು, ಬಳಿಕ ನಾನೇ ಮುಖ್ಯಮಂತ್ರಿ ಎಂದು ಬಿ.ಎಸ್. ಯಡಿಯೂರಪ್ಪ ಹೇಳುತ್ತಿದ್ದಾರೆ. ಅಧಿಕಾರ ಇದ್ದಾಗ ಜನಪರ ಅಭಿವೃದ್ಧಿ ಕೆಲಸಗಳನ್ನು ಮಾಡದ ಅವರು, ಮತ್ತೆ ಜೈಲಿಗೆ ಹೋಗಲು ಮುಖ್ಯಮಂತ್ರಿ ಆಗಬೇಕಾ ಎಂದು ವ್ಯಂಗ್ಯವಾಡಿದರು.
ಪ್ರಜಾಪ್ರಭುತ್ವದಲ್ಲಿ ಜನರ ತೀರ್ಪಿಗೆ ಬದ್ಧರಾಗಿ, ಬಾಯಿ ಮುಚ್ಚಿಕೊಂಡು ವಿರೋಧ ಪಕ್ಷದಲ್ಲಿ ಕೆಲಸ ಮಾಡಬೇಕು. ಆದರೆ, ಈ ಮಾನಗೆಟ್ಟ ಮತ್ತು ಲಜ್ಜೆಗೆಟ್ಟ ಬಿಜೆಪಿಯವರು 23ರ ಬಳಿಕ ನಮ್ಮ ಸರ್ಕಾರ ಬರುತ್ತದೆ ಎಂದು ಹೇಳುತ್ತಲೇ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಮೂರೂ ಬಿಟ್ಟಿರುವ ಇವರಿಗೆ ಮರ್ಯಾದೆಯೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಅಧಿಕಾರದಲ್ಲಿದ್ದಾಗ ರೈತರ ಸಾಲ ಮನ್ನಾ ಮಾಡಿ ಎಂದು ನಾವು ಕೇಳಿದೆವು. ಆದರೆ ಅವರು ಮಾಡಿಲ್ಲ. ಈಶ್ವರಪ್ಪ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದಾಗ ನೋಟು ಎಣಿಸುವ ಯಂತ್ರ ಸಿಕ್ಕಿತ್ತು ಎಂದು ತರಾಟೆಗೆ ತೆಗೆದುಕೊಂಡರು.