ಮಂಡ್ಯ, ಮೇ14(Daijiworld News/SS): ಚುನಾವಣೆಯಲ್ಲಿ ನಾನೇ ಗೆಲ್ಲುತ್ತೇನೆ ಎನ್ನುವ ಅತಿಯಾದ ಆತ್ಮವಿಶ್ವಾಸ ಇಲ್ಲ. ಇಷ್ಟೇ ಮತಗಳ ಅಂತರದಿಂದ ಜಯಿಸುತ್ತೇನೆ ಎಂದು ಹೇಳಲಾರೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಪರವಾಗಿ ಪಾಸಿಟಿವ್ ಅಲೆಯಿದೆ. ಚುನಾವಣಾ ಪ್ರಚಾರ ಮತ್ತು ಮತದಾನದ ದಿನದಂದು ಆ ಸುಳಿವು ನನಗೆ ಸಿಕ್ಕಿದೆ. ಜನರ ಪ್ರತಿಕ್ರಿಯೆ ನೋಡಿದರೆ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಈ ಬಾರಿಯ ಚುನಾವಣಾ ಫಲಿತಾಂಶದ ಬಗ್ಗೆ ನಾವು ಯಾವುದೇ ಸಮೀಕ್ಷೆ ನಡೆಸಿಲ್ಲ. ಚುನಾವಣೋತ್ತರ ಸಮೀಕ್ಷೆಗಳ ಮೇಲೆ ನನಗೆ ನಂಬಿಕೆ ಇಲ್ಲ. ಪ್ರತಿದಿನವೂ ಒಂದೊಂದು ಸಮೀಕ್ಷಾ ವರದಿ ಪ್ರಕಟವಾಗುತ್ತಿದೆ. ಅದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಮಂಡ್ಯದ ಮತದಾರರ ಮೇಲೆ ನನಗೆ ಭರವಸೆ ಇದೆ. ಜನರ ಅಭಿಪ್ರಾಯವನ್ನು ಕ್ರೋಡೀಕರಿಸಲಾಗಿದೆ. ಫಲಿತಾಂಶ ನನ್ನ ಪರವಾಗಿಯೇ ಬರುವ ನಂಬಿಕೆಯಿದೆ ಎಂದು ಹೇಳಿದರು.
ಮಂಡ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಫಲ ಕೊಟ್ಟಿಲ್ಲ. ಅದರಲ್ಲಿ ರಹಸ್ಯ ಉಳಿದಿಲ್ಲ. ಆ ಪಕ್ಷದ ಕಾರ್ಯಕರ್ತರು ನನಗೆ ನೇರವಾಗಿಯೇ ಬೆಂಬಲ ನೀಡಿದ್ದಾರೆ. ಆ ಪಕ್ಷಗಳ ಮುಖಂಡರ ನಡುವಿನ ವಾಕ್ಸಮರದ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಪ್ರತಿಯೊಬ್ಬರಿಗೂ ಖಾಸಗಿ ಬದುಕು ಇರುತ್ತದೆ. ಹೋಟೆಲ್ನಲ್ಲಿ ನಡೆದ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ನಾನೂ ಹೋಗಿದ್ದೆ. ಅಲ್ಲಿಗೆ ಕಾಂಗ್ರೆಸ್ ನಾಯಕರು ಬಂದಿದ್ದರು ಎಂದು ಸ್ಪಷ್ಟಪಡಿಸಿದರು.