ತಿರುವನಂತಪುರ,ಮೇ 15 (Daijiworld News/MSP): ಬಿಸಿಲಿನಿಂದ ಬಸವಳಿದಿರುವ ಕೇರಳಕ್ಕೆ ತಂಪನ್ನೆರೆಯಲು ಜೂನ್ ಮೊದಲ ವಾರದಲ್ಲಿ ಮುಂಗಾರು ಮಾನ್ಸೂನ್ ಮಾರುತ ಪ್ರವೇಶಿಸಲಿದೆ.
ವಾಯುವ್ಯ ಮುಂಗಾರು ಮಾರುತ ಮುಂದಿನ ತಿಂಗಳ ಮೊದಲ ವಾರ ಅಂದರೆ ಜೂನ್ 4 ರಂದು ಕೇರಳಕ್ಕೆ ಪ್ರವೇಶಿಸಲಿದೆ. ಈ ಬಗ್ಗೆ ಸ್ಕೈಮೆಟ್ ಹವಾಮಾನ ಮಾಹಿತಿ ಸಂಸ್ಥೆ ಮಾಹಿತಿ ನೀಡಿದ್ದು ಮಾನ್ಸೂನ್ ಮಳೆಯ ಸರಾಸರಿ ಪ್ರಮಾಣ ಈ ಬಾರಿ ಕುಗ್ಗಲಿದೆ.
ಪ್ರತಿ ವರ್ಷ ಜೂನ್ 1ಕ್ಕೆ ಕೇರಳ ಪ್ರವೇಶಿಸುವ ಮಾನ್ಸೂನ್ ಜುಲೈ ಮಧ್ಯದಲ್ಲಿ ದೇಶದಾದ್ಯಂತ ಆವರಿಸುತ್ತಿತ್ತು. ಈ ಬಾರಿ ಸರಾಸರಿ ಶೇ.93 ಮಾನ್ಸೂನ್ ಮಳೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಇನ್ನು ಖಾಸಗಿ ಹವಾಮಾನ ಇಲಾಖೆ ನೀಡಿರುವ ಮಾಹಿತಿಯಂತೆ ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಈ ಬಾರಿಯೂ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದ ಉತ್ತರ ಒಳನಾಡಿನಲ್ಲಿ ಮಾತ್ರ ಮಳೆ ಪ್ರಮಾಣ ಕುಂಠಿತವಾಗಲಿದೆ. ಇನ್ನು ಕರ್ನಾಟಕ ಕರಾವಳಿಗೆ ಈ ಬಾರಿ ಜೂ. 6-7ರ ವೇಳೆಗೆ ಮುಂಗಾರು ಪ್ರವೇಶಿಸುವ ನಿರೀಕ್ಷೆ.