ತಿರುವನಂತಪುರ, ಮೇ 15 (Daijiworld News/MSP): ಬ್ಯಾಂಕ್ ಕಳುಹಿಸಿದ ಮನೆ ಜಪ್ತಿ ನೋಟೀಸ್ ಮೇರೆಗೆ ಮನನೊಂದು, ಮಹಿಳಾ ಗ್ರಾಹಕರೊಬ್ಬರು ತನ್ನ ಮಗಳೊಂದಿಗೆ ಆತ್ಮಹತ್ಯೆ ಮಾಡಿದ ಕಾರಣ ಕಾಂಗ್ರೆಸ್ ನ ವಿದ್ಯಾರ್ಥಿ ಸಂಘಟನೆಯಾದ ಕೆ.ಎಸ್.ಯು ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ತಿರುವನಂತಪುರದ ರೀಜನಲ್ ಕೆನರಾ ಬ್ಯಾಂಕ್ ಕಚೇರಿಯನ್ನು ದ್ವಂಸಗೊಳಿಸಿದ ಘಟನೆ ಮೇ 15 ರ ಬುಧವಾರ ನಡೆದಿದೆ.
15 ವರ್ಷಗಳ ಹಿಂದೆ ಲೇಖಾ (40) ಎಂಬ ಮಹಿಳೆ ಕೆನರಾ ಬ್ಯಾಂಕ್ ನ ನೆಯ್ಯಟ್ಟಿಂಗರ ಶಾಖೆಯಿಂದ 5 ಲಕ್ಷ ಗೃಹ ಸಾಲ ಪಡೆದಿದ್ದರು. ಬಳಿಕ ಬಡ್ಡಿ ಸೇರಿಸಿ 8 ಲಕ್ಷ ಹಣವನ್ನು ಕಂತುಗಳಲ್ಲಿ ಮರುಪಾವತಿ ಮಾಡಿದ್ದರು. ಆದರೆ ಬ್ಯಾಂಕ್ ಇದಲ್ಲದೆ 4 ಲಕ್ಷದ 80 ಸಾವಿರ ಬಾಕಿ ಪಾವತಿಸುವಂತೆ ನಿರಂತರ ಒತ್ತಡ ಹಾಕಿತ್ತು. ಮಾತ್ರವಲ್ಲದೆ ಮನೆ ಜಪ್ತಿ ಮಾಡುವ ನೋಟೀಸ್ ಕಳುಹಿಸಿತ್ತು. ಇದರಿಂದ ಮನನೊಂದ ಲೇಖ ಹಾಗೂ ಪದವಿ ಪೂರ್ವ ವ್ಯಾಸಂಗ ಮಾಡುತ್ತಿದ್ದ ಮಗಳು ವೈಷ್ಟವಿ (19) ಇವರಿಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಇದರಿಂದ ಇಂದು ಬೆಳಗ್ಗೆ ತಿರುವನಂತಪುರದ ರಿಜಿನಲ್ ಕೆನರಾ ಬ್ಯಾಂಕ್ ಮುಂದೆ ಕೆ.ಎಸ್.ಯು ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸುತ್ತಿದ್ದರು.
ತಾಯಿ ಮಗಳ ಸಾವಿಗೆ ಬ್ಯಾಂಕ್ ಕಾರಣ ಎಂದು ಆರೋಪಿಸಿ ಪ್ರತಿಭಟನೆ ವೇಳೆ ಉದ್ರೀಕ್ತರಾದ ಸುಮಾರು 25 ಕಾರ್ಯಕರ್ತರು ಬ್ಯಾಂಕ್ ಆವರಣದೊಳಗೆ ನುಗ್ಗಿ ದಾಂಧಲೆ ನಡೆಸಿ ಬ್ಯಾಂಕ್ ಸೊತ್ತುಗಳು ಪುಡಿಗೈದು ಹಾನಿಗೊಳಿಸಿದ್ದಾರೆ.
ಪ್ರತಿಭಟನೆಗೆ ಹೆದರಿ ಉತ್ತರ ಕೇರಳದ ಬಹುತೇಕ ಕೆನರಾ ಬ್ಯಾಂಕ್ ತನ್ನ ವಹಿವಾಟು ಸ್ಥಗಿತಗೊಳಿಸಿದೆ.