ಗೊಲ್ಲಪ್ರೋಲು, ಜು.02(DaijiworldNews/AA): ಆಂಧ್ರ ಪ್ರದೇಶದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ರಾಜ್ಯಕ್ಕೆ ವಿತ್ತಿಯ ಕೊರತೆ ಎದುರಾಗಿದೆ. ಹೀಗಾಗಿ ಡಿಸಿಎಂ ಪವನ್ ಕಲ್ಯಾಣ್ ತಮ್ಮ ಸಂಬಳ ಹಾಗೂ ಕಚೇರಿಗೆ ಒದಗಿಸುವ ಹೊಸ ಪೀಠೋಪಕರಣಗಳು ಸೇರಿದಂತೆ ಯಾವುದೇ ವಿಶೇಷ ಭತ್ಯೆಗಳನ್ನು ಸ್ವೀಕರಿಸುವುದಿಲ್ಲ ಎಂದಿದ್ದಾರೆ.
ಆಂಧ್ರ ಸರ್ಕಾರದ ಬಳಿ ಹೊಸ ಯೋಜನೆಗಳಿಗೆ ಹಣಕಾಸು ಕೊರತೆ ಇದೆ. ಇಂಥಹಾ ಸಮಯದಲ್ಲಿ ತಾವು ಸಂಬಳ ಇನ್ನಿತರೆ ಸಂಪನ್ಮೂಲಗಳನ್ನು ಪಡೆಯುವುದು ಸೂಕ್ತವಲ್ಲ ಎಂಬ ಕಾರಣಕ್ಕೆ ಪವನ್ ಕಲ್ಯಾಣ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಅಧಿಕಾರದಲ್ಲಿ ಇರುವವರೆಗೂ ಸಂಬಳ ಪಡೆಯುವುದಿಲ್ಲ ಅಲ್ಲದೆ ಸರ್ಕಾರಿ ಕಾರು ಬಳಸುವುದಿಲ್ಲ. ಕಚೇರಿಗೆ ಹೆಚ್ಚುವರಿ ಪೀಠೋಪಕರಣಗಳು ಇನ್ನಿತರೆ ವಸ್ತುಗಳು ಬೇಕೆಂದರೂ ಕೂಡ ಅವನ್ನು ತಮ್ಮದೇ ಸ್ವಂತ ಖರ್ಚಿನಲ್ಲಿ ಹಾಕಿಸಿಕೊಳ್ಳುವುದಾಗಿ ನಟ, ಡಿಸಿಎಂ ಪವನ್ ಕಲ್ಯಾಣ್ ಘೋಷಣೆ ಮಾಡಿದ್ದಾರೆ.
ಇದರೊಂದಿಗೆ ಮೂರು ದಿನಗಳ ಕಾಲ ವಿಧಾನಸಭೆಯಲ್ಲಿ ಭಾಗವಹಿಸಿದ್ದಕ್ಕೆ ಬಿಡುಗಡೆಯಾಗಿದ್ದ 35,000 ಸಾವಿರ ರೂ. ಹಣವನ್ನು ಕೂಡ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.