ಮುಂಬೈ,ಮೇ 15 (Daijiworld News/MSP): ಪೇಟಿಎಂ ಕ್ಯಾಶ್ ಬ್ಯಾಕ್ ನಲ್ಲಿ ವಂಚನೆ ನಡೆದಿದ್ದು ಈ ಸಂಬಂಧ ಹಲವಾರು ನೌಕರರನ್ನು ಸಂಸ್ಥೆಯಿಂದ ವಜಾಗೊಳಿಸಲಾಗಿದೆ. ಈ ಮಹತ್ವದ ಬೆಳವಣಿಗೆಯ ನಂತರ ಕ್ಯಾಶ್ ಬ್ಯಾಕ್ ವಹಿವಾಟು ಮೇಲೆ ಯಾವುದೇ ತೊಂದರೆ ಆಗುವುದಿಲ್ಲ ಮತ್ತು ಎಂದಿನಂತೆ ವಹಿವಾಟು ನಡೆಯಲಿದೆ ಎಂದು ಪೇಟಿಎಂ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ವಿಜಯ್ ಶೇಖರ್ ಶರ್ಮ ವಿವರಿಸಿದ್ದಾರೆ.
ಸಣ್ಣ ವ್ಯಾಪಾರಿಗಳು ಮತ್ತು ಮಾರಾಟಗಾರರಿಂದ ಬಂದ ಕ್ಯಾಶ್ ಬ್ಯಾಕ್ ನ ಬಗ್ಗೆ ತನಿಖೆ ನಡೆಸಿದ ಪ್ರಕರಣ ಬೆಳಕಿಗೆ ಬಂದಿದ್ದು, ಸುಮಾರು 10 ಕೋಟಿ ರೂಪಾಯಿಗಳವರೆಗೆ ವಂಚನೆ ನಡೆದಿರುವುದು ತಿಳಿದುಬಂದಿದೆ. ಕಳೆದ ನವೆಂಬರ್ ತಿಂಗಳ ಬಳಿಕ ಒಂದಷ್ಟು ಸಣ್ಣ ವ್ಯಾಪಾರಿಗಳು ಕ್ಯಾಶ್ ಬ್ಯಾಕ್ ಆಫರ್ ಮೂಲಕ ಬಹುದೊಡ್ಡ ಮೊತ್ತದವನ್ನು ಪಡೆದಿರುವುದು ಪತ್ತೆಯಾಗಿದ್ದು ಇದು ಲೆಕ್ಕಪರಿಶೋಧನೆ ವೇಳೆ ತಿಳಿದುಬಂದಿದೆ.
ಕ್ಯಾಶ್ ಬ್ಯಾಕ್ ನ ಕಮಿಷನ್ ಪಡೆಯಲು ಕೆಲವು ಸಣ್ಣ ವ್ಯಾಪಾರಿಗಳು ಕಂಪೆನಿಯ ಕೆಳಮಟ್ಟದ ನೌಕರರ ಜೊತೆ ರಹಸ್ಯ ಡೀಲ್ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೇಟಿಎಂ ವಕ್ತಾರು ತಿಳಿಸಿದ್ದಾರೆ.