ನವದೆಹಲಿ, ಜು.02(DaijiworldNews/AK): ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡರು.
ಇಂದು ಸಂಸತ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರಪತಿಗಳಿಗೆ ವಂದನಾ ನಿರ್ಣಯದ ಮೇಲೆ ಮಾತನಾಡಿದರು. ಪ್ರಧಾನಿಯವರು ಭಾಷಣ ಪ್ರಾರಂಭ ಮಾಡುತ್ತಿದ್ದಂತೆಯೇ ವಿಪಕ್ಷ ನಾಯಕರು ಗದ್ದಲವನ್ನು ಉಂಟು ಮಾಡಿದರು. ಅಲ್ಲದೇ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುವಂತೆ ರಾಹುಲ್ ಗಾಂಧಿಯವರು ತಮ್ಮ ನಾಯಕರಿಗೆ ಸೂಚಿಸಿದ್ದಾರೆ. ಈ ಮೂಲಕ ಪ್ರಧಾನಿ ಭಾಷಣಕ್ಕೆ ತಡೆಯಲು ಮುಂದಾದರು.
ಈ ವೇಳೆ ಸ್ಪೀಕರ್ ಓಂ ಬಿರ್ಲಾ ಅವರು, ಸದನದಲ್ಲಿ ಮಾತನಾಡಲು ಸಾಕಷ್ಟು ಅವಕಾಶ ಮತ್ತು ಸಮಯವನ್ನು ನೀಡಲಾಗಿದೆ ಎಂದು ಹೇಳಿದರು. ಅಲ್ಲದೇ ಸಂಸತ್ತಿನ ಘನತೆಯನ್ನು ಕಾಪಾಡಿಕೊಳ್ಳುವಂತೆ ರಾಹುಲ್ಗೆ ಸ್ಪೀಕರ್ ತಿಳಿಸಿದರು.
ಆತ್ಮೀಯ ವಿರೋಧ ಪಕ್ಷದ ನಾಯಕರೇ, ಇದು ನಿಮಗೆ ಸರಿಹೊಂದುವುದಿಲ್ಲ. ನಿಮಗೆ ಸಾಕಷ್ಟು ಅವಕಾಶಗಳು ಮತ್ತು ಸಮಯವನ್ನು ನೀಡಲಾಗಿದೆ. ಸಭಾನಾಯಕರು ಮಾತನಾಡುವಾಗ ಸದನದಲ್ಲಿ ನಿರ್ದೇಶನ ನೀಡುತ್ತಿರುವುದು ನಿಮಗೆ ಶೋಭೆ ತರಲ್ಲ. ಸಂಸತ್ತಿನ ಸಂಪ್ರದಾಯಗಳ ಪ್ರಕಾರ ಇದು ಸೂಕ್ತವಲ್ಲ. ಸಂಸತ್ತಿನ ಘನತೆ ಕಾಪಾಡಿ ಎಂದು ಸ್ಪೀಕರ್ ಓಂ ಬಿರ್ಲಾ ತರಾಟೆಗೆ ತೆಗೆದುಕೊಂಡರು.