ರಾಮನಗರ, ಜು.03(DaijiworldNews/AA): ಮುಂದೊಂದು ದಿನ ಈ ಚನ್ನಪಟ್ಟಣ ಬೆಂಗಳೂರಿಗೆ ಸೇರುತ್ತೆ. ನಾನು ಜವಾಬ್ದಾರಿ ಸ್ಥಾನದಲ್ಲಿ ಇದ್ದು ಈ ಮಾತನ್ನ ಹೇಳ್ತಿದ್ದೇನೆ. ಚನ್ನಪಟ್ಟಣಕ್ಕೆ ಹೊಸ ಚೈತನ್ಯ ತುಂಬುವ ಕೆಲಸ ಆಗುತ್ತೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಭರವಸೆ ವ್ಯಕ್ತಪಡಿಸಿದ್ದಾರೆ.
ಚನ್ನಪಟ್ಟಣ ಟೌನ್ ವ್ಯಾಪ್ತಿಯಲ್ಲಿ ಜನಸ್ಪಂದನಾ ಸಭೆ ನಡೆಸಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಗರದ ವಿವಿಧ ವಾರ್ಡ್ಗಳ ಸಾರ್ವಜನಿಕರ ಕುಂದುಕೊರತೆ ಆಲಿಸಿದರು. ಚನ್ನಪಟ್ಟಣ ಟೌನ್ ವ್ಯಾಪ್ತಿಯಲ್ಲಿ ಜನಸ್ಪಂದನಾ ಸಭೆ ನಡೆಸಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಗರದ ವಿವಿಧ ವಾರ್ಡ್ಗಳ ಸಾರ್ವಜನಿಕರ ಕುಂದುಕೊರತೆ ಆಲಿಸಿದರು. ಇದೇ ವೇಳೆ ಮಾತನಾಡಿದ ಅವರು, ಚನ್ನಪಟ್ಟಣ ಕತ್ತಲೆಯಲ್ಲಿದೆ. ಇದಕ್ಕೆ ಬೆಳಕು ಬೇಕು. ಈ ಕ್ಷೇತ್ರವನ್ನ ಅಭಿವೃದ್ಧಿ ಮಾಡೋದಕ್ಕೆ ನಾವಿಲ್ಲಿ ಬಂದಿರೋದು ಎಂದು ಹೇಳಿದರು.
ತಾಲೂಕಿನಲ್ಲಿ 9 ಜನಸ್ಪಂದನಾ ಕಾರ್ಯಕ್ರಮ ಮಾಡಲಾಗಿದೆ. ಜಿಲ್ಲಾ ಹಾಗೂ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಇಲ್ಲಿಗೆ ಬಂದಿದ್ದಾರೆ. ಈಗಾಗಲೇ 10 ಸಾವಿರ ಅರ್ಜಿಗಳು ಬಂದಿವೆ. ನಿಮ್ಮ ಮನೆ ಬಾಗಿಲಿಗೆ ಬಂದು ಸಮಸ್ಯೆಗೆ ಪರಿಹಾರ ನೀಡಲಾಗುತ್ತಿದೆ. ಎಲ್ಲಿ ಅನ್ಯಾಯ ಆಗಿದೆ ಅದನ್ನ ಸರಿಪಡಿಸುವ ಕೆಲಸ ಆಗುತ್ತದೆ. ಸೈಟ್, ಮನೆ, ಖಾತೆ, ರಸ್ತೆ, ಚರಂಡಿ ಸೇರಿ ಸಾಕಷ್ಟು ಸಮಸ್ಯೆಗಳು ಗಮನಕ್ಕೆ ಬಂದಿದೆ ಎಂದು ತಿಳಿಸಿದರು.
ಚನ್ನಪಟ್ಟಣ ಇತಿಹಾಸದಲ್ಲೇ ಈ ರೀತಿಯ ಕಾರ್ಯಕ್ರಮ ನಡೆದಿರಲಿಲ್ಲ. ಎಲ್ಲರಿಗೂ ಗ್ಯಾರಂಟಿ ಯೋಜನೆಗಳು ತಲುಪುತ್ತಿವೆ. ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಕೆಲಸ ಮಾಡ್ತಿದ್ದೇವೆ. ನೀವು ಕೊಟ್ಟಿರೋ ಎಲ್ಲಾ ಅರ್ಜಿಗಳನ್ನ ವಿಲೇವಾರಿ ಮಾಡ್ತೀವಿ. ಮುಂದಿನ ದಿನ ಈ ಬಗ್ಗೆ ಅಧಿಕಾರಗಳ ಸಭೆ ಮಾಡಿ ರಿವ್ಯೂ ಮಾಡ್ತೀನಿ. ಚನ್ನಪಟ್ಟಣ ನಗರಕ್ಕೆ ಅನೇಕ ಕಾರ್ಯಕ್ರಮ ರೂಪಿಸಿ ಅಭಿವೃದ್ಧಿ ಮಾಡುತ್ತೇವೆ. ಚನ್ನಪಟ್ಟಣ ಸುತ್ತಮುತ್ತ ಸುಮಾರು 30 ಎಕರೆ ವ್ಯಾಪ್ತಿಯಲ್ಲಿ ಹೊಸ ಟೌನ್ ನಿರ್ಮಾಣ ಮಾಡಿ ಎಲ್ಲಾ ಬಡವರಿಗೆ ಸೈಟ್ ಕೊಡುವ ಕೆಲಸ ಆಗುತ್ತೆ ಎಂದರು.